ವಿರಾಟ್ ಕೊಹ್ಲಿ ಟೀಕಿಸಿದ್ದಕ್ಕೆ ಅಂಬಟಿ ರಾಯುಡು ಮಕ್ಕಳಿಗೆ ಬೆದರಿಕೆ

Krishnaveni K

ಗುರುವಾರ, 30 ಮೇ 2024 (08:24 IST)
ಚೆನ್ನೈ: ಇತ್ತೀಚೆಗೆ ಐಪಿಎಲ್ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಆರ್ ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಬಗ್ಗೆ ಚೆನ್ನೈ ಮಾಜಿ ಕ್ರಿಕೆಟಿಗ, ಕಾಮೆಂಟೇಟ್ ಅಂಬಟಿ ರಾಯುಡು ನೀಡಿದ ಹೇಳಿಕೆಗಳಿಂದ ಕುಟುಂಬಸ್ಥರೂ ಸಂಕಷ್ಟ ಎದುರಿಸುವಂತಾಗಿದೆ.

ವಿರಾಟ್ ಕೊಹ್ಲಿ ದಿಗ್ಗಜ ಆಟಗಾರ. ಆದರೆ ಅವರು ಎಂತಹ ಗುಣಮಟ್ಟ ಸೆಟ್ ಮಾಡಿದ್ದಾರೆ ಎಂದರೆ ಅವರೊಂದಿಗೆ ಹೊಂದಿಕೊಳ್ಳಲು ಇತರೆ ಆಟಗಾರರಿಗೂ ಕಷ್ಟವಾಗುತ್ತಿದೆ. ಹೀಗಾಗಿ ಅವರು ತಮ್ಮ ಗುಣಮಟ್ಟವನ್ನು ಕೊಂಚ ಕೆಳಗಿಳಿಸಬೇಕು ಎಂದಿದ್ದರು. ಇನ್ನೊಂದೆಡೆ ಆರೆಂಜ್ ಕ್ಯಾಪ್ ಗೆದ್ದ ಮಾತ್ರಕ್ಕೆ ಐಪಿಎಲ್ ಟೂರ್ನಿ ಗೆಲ್ಲಲಾಗದು ಎಂದು ಕೊಹ್ಲಿಗೆ ಟಾಂಗ್ ಕೊಟ್ಟಿದ್ದರು.

ಅಂಬಟಿ ರಾಯುಡು ನೀಡಿದ್ದ ಈ ಹೇಳಿಕೆಗಳು ಈಗ ಅವರಿಗೇ ಮುಳುವಾಗಿದೆ. ಅವರ ಹೇಳಿಕೆಗಳಿಂದ ಕೊಹ್ಲಿ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಇದೀಗ ಅತಿರೇಕಕ್ಕೆ ಹೋಗಿದೆ. ಅಂಬಟಿ ರಾಯುಡು ಕುಟುಂಬಕ್ಕೆ ಸೋಷಿಯಲ್ ನೀಡಿಯಾದಲ್ಲಿ ಬೆದರಿಕೆ ಬರುತ್ತಿದೆ ಎಂದು ಅವರ ಸ್ನೇಹಿತರು ಹೇಳಿಕೊಂಡಿದ್ದಾರೆ.

ಇದು ಎಷ್ಟರಮಟ್ಟಿಗೆ ತಲುಪಿದೆಯೆಂದರೆ ಕೊಹ್ಲಿ ಮತ್ತು ಆರ್ ಸಿಬಿ ಅಭಿಮಾನಿಗಳು ಅಂಬಟಿ ರಾಯುಡು ಅವರ 1 ಮತ್ತು ನಾಲ್ಕು ವರ್ಷದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವುದಾಗಿ, ಕೊಲೆ ಮಾಡುವುದಾಗಿ ಬೆದರಿಕೆ ಬರುತ್ತಿವೆ ಎಂದು ಸ್ನೇಹಿತ ಸ್ಯಾಮ್ ಪಾಲ್ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಸ್ವತಃ ಅಂಬಟಿ ರಾಯುಡು ಅವರ ಪತ್ನಿ ವಿದ್ಯಾ ತನ್ನ ಬಳಿ ಹೇಳಿಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇಂತಹವರ ವಿರುದ್ಧ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ