ಹಿರಿಯರಿಗೆ ಸಿಗದ ಕಿರೀಟ ಕಿರಿಯರಿಗೂ ಇಲ್ಲ: ವಿಶ್ವಕಪ್ ಫೈನಲ್ ಎಂಬುದು ಭಾರತಕ್ಕೆ ಮರೀಚಿಕೆ

Krishnaveni K

ಸೋಮವಾರ, 12 ಫೆಬ್ರವರಿ 2024 (08:43 IST)
ಬೆನೊನಿ: ಕೆಲವು ತಿಂಗಳ ಮೊದಲು ಹಿರಿಯರ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದನ್ನು ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಇನ್ನೂ ಮರೆತಿಲ್ಲ. ಅದಕ್ಕೆ ಮೊದಲೇ ಅದೇ ಆಸೀಸ್ ಎದುರು ಕಿರಿಯರ ವಿಶ್ವಕಪ್ ಫೈನಲ್ ನಲ್ಲಿ ಸೋತು ಮತ್ತೆ ಫೈನಲ್ ಗೆಲುವು ಎಂಬುದು ಭಾರತಕ್ಕೆ ಮರೀಚಿಕೆ ಎಂಬುದನ್ನು ನಿರೂಪಿಸಿದ್ದಾರೆ.

ಅಂಡರ್ 19 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 79 ರನ್ ಗಳಿಂದ ಸೋಲು ಅನುಭವಿಸಿದೆ. ಇದುವರೆಗೂ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದ ಕಿರಿಯರು ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ. ಆ ಮೂಲಕ ಮತ್ತೊಮ್ಮೆ ಭಾರತ ಹಿರಿಯರಿರಲಿ, ಕಿರಿಯರಿರಲಿ ಫೈನಲ್ ನಲ್ಲಿ ಮುಗ್ಗರಿಸುವ ಚಾಳಿ ಮುಂದುವರಿಸಿದ್ದಾರೆ.

ಕಳಪೆ ಬ್ಯಾಟಿಂಗ್ ಗೆ ತಕ್ಕ ಬೆಲೆ ತೆತ್ತ ಭಾರತ
ಗೆಲುವಿಗೆ 254 ರನ್ ಗಳ ಗುರಿ ಬೆನ್ನತ್ತಿದ್ದ ಭಾರತಕ್ಕೆ ಮತ್ತೆ ಬ್ಯಾಟಿಂಗ್ ಕೈಕೊಟ್ಟಿತು. ಸೆಮಿಫೈನಲ್ ನಲ್ಲಿ ದ.ಆಫ್ರಿಕಾ ವಿರುದ್ಧವೂ ಭಾರತ ಇದೇ ರೀತಿ ಅಗ್ರ ಕ್ರಮಾಂಕದ ವೈಫಲ್ಯದಿಂದ ಸಂಕಷ್ಟದಲ್ಲಿತ್ತು. ಆದರೆ ಆ ಪಂದ್ಯದಲ್ಲಿ ನಾಯಕ ಉದಯ್ ಸುಹಾರಣ್ ಮತ್ತು ಸಚಿನ್ ಭರ್ಜರಿಯ ಜೊತೆಯಾಟವಾಡಿ ಪಂದ್ಯ ಗೆಲ್ಲಿಸಿದ್ದರು. ಆದರೆ ಇಂದು ಆ ಕಮಾಲ್ ಕೂಡಾ ನಡೆಯಲಿಲ್ಲ.  ಆರಂಭಿಕ ಆದರ್ಶ್ ಸಿಂಗ್ 47 ಮತ್ತು ಕೆಳ ಕ್ರಮಾಂಕದಲ್ಲಿ ಮುರುಗನ್ ಅಭಿಷೇಕ್ 42 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವ ಪ್ರದರ್ಶನ ಬರಲಿಲ್ಲ. ಕಳೆದ ಪಂದ್ಯದ ಹೀರೋ ಸಚಿನ್ ದಾಸ್ ಕೇವಲ 9, ನಾಯಕ ಉದಯ್ ಕೇವಲ 8 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ತಕ್ಕ ಸಮಯದಲ್ಲೇ ಬ್ಯಾಟಿಂಗ್ ಕೈ ಕೊಟ್ಟು ಮತ್ತೊಮ್ಮೆ ಒತ್ತಡದ ಪಂದ್ಯದಲ್ಲಿ ಭಾರತ ಮುಗ್ಗರಿಸಿ ಬಿತ್ತು. ಅಂತಿಮವಾಗಿ ಟೀಂ ಇಂಡಿಯಾ 43.5 ಓವರ್ ಗಳಲ್ಲಿ 174 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಹಿರಿಯರ ಏಕದಿನ ವಿಶ್ವಕಪ್ ಕೂಡಾ ಆಸ್ಟ್ರೇಲಿಯಾ ಮಡಿಲಿಗೆ ಸೇರಿಕೊಂಡಿತ್ತು. ಆಗಲೂ ಎಲ್ಲಾ ಪಂದ್ಯಗಳಲ್ಲಿ ಭರ್ಜರಿ ಆಡಿದ್ದ ಭಾರತ ಫೈನಲ್ ನಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋತಿತ್ತು. ಕಿರಿಯರೂ ಹಿರಿಯರದ್ದೇ ಹಾದಿ ಹಿಡಿದದ್ದು ಖೇದಕರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ