ಅಲೆಕ್ಸಾಂಡರ್ ಹಾವಿನ ರಕ್ತಕ್ಕೆ ವಿಜೇಂದರ್ ದೇಸಿ ತುಪ್ಪದ ತಿರುಗೇಟು

ಶನಿವಾರ, 12 ಮಾರ್ಚ್ 2016 (16:34 IST)
ವೃತ್ತಿ ಪರ ಬಾಕ್ಸಿಂಗ್ ಸೆಣಸಾಟಗಳಿಗೆ ಮುನ್ನ ಬಾಕ್ಸರ್‌ಗಳು ತಮ್ಮ ಎದುರಾಳಿಗಳನ್ನು ಛೇಡಿಸುವ, ಹಂಗಿಸುವ ಮೂಲಕ ಗಮನ ಸೆಳೆಯುತ್ತಾರೆ. ಹಂಗರಿಯ ಮಿಡಲ್ ವೈಟ್ ಬಾಕ್ಸರ್ ಅಲೆಕ್ಸಾಂಡರ್ ಹೋರ್ವಾತ್ ಅವರು ವಿಜೇಂದರ್ ಅವರನ್ನು ಹಂಗಿಸಲು ಯತ್ನಿಸಲಿಲ್ಲ. ಆದರೆ ತಾನು ಹಾವಿನ ರಕ್ತ ಕುಡಿಯುವುದರಿಂದ ವಿಜೇಂದರ್ ಗಿಂತ ಶಕ್ತಿಶಾಲಿ ಎಂದು ತೋರಿಸಲು ಯತ್ನಿಸಿದ್ದಾರೆ.

 ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವಿರುದ್ಧ ಶನಿವಾರದ ಸೆಣೆಸಾಟಕ್ಕೆ ಮುನ್ನ ತಾನು ಹಾವಿನ ರಕ್ತ ಕುಡಿದು ಸಿಂಗ್ ವಿರುದ್ಧ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದು ಅನೇಕ ಮಂದಿಯ ಕುತೂಹಲ ಕೆರಳಲು ಕಾರಣವಾಗಿದೆ.

ಆದರೆ ಎದುರಾಳಿಯ ಬಿಲ್ಡ್ ಅಪ್ ಸ್ಟಂಟ್ ಎಷ್ಟೇ ವಿಚಿತ್ರವಾಗಿದ್ದರೂ ವಿಜೇಂದರ್ ತನ್ನ ದಾರಿಗಳನ್ನು ಬದಲಿಸುವುದಿಲ್ಲ ಎಂದಿದ್ದಾರೆ. ಎದುರಾಳಿಯ ಹಾವಿನ ರಕ್ತದ ಆಹಾರಕ್ಕೆ  ವಿಜೇಂದರ್  ತಾನು ಪರಿಶುದ್ಧ ದೇಸಿ ತುಪ್ಪವನ್ನು ಸೇವಿಸುತ್ತಿರುವುದು 6 ಸುತ್ತಿನ ಹೋರಾಟದಲ್ಲಿ ತನಗೆ ಶಕ್ತಿ ತುಂಬುತ್ತದೆಂದು ಭಾವಿಸಿದ್ದಾರೆ.
 
ಈ ಮುಷ್ಠಿಕಾಳಗ ಕುರಿತು ಪ್ರತಿಕ್ರಿಯಿಸಿದ ವಿಜೇಂದರ್ ಅಲೆಕ್ಸಾಂಡರ್‌ಗೆ ಎಚ್ಚರಿಕೆ ನೀಡಿದ್ದಾರೆ. ಅವರು ಹಾವಿನ ರಕ್ತವನ್ನು ಆಹಾರವಾಗಿ ಸೇವಿಸಿದ್ದನ್ನು ನಾನು ಕೇಳಿದ್ದೇನೆ. ಬಹುಶಃ ಅದು ಅವರ ಸಿದ್ಧತೆಯ ಧಾಟಿಯಾಗಿದ್ದು, ಅದರಿಂದ ನನ್ನನ್ನು ಸೋಲಿಸಬಹುದೆಂದು ಭಾವಿಸಿದ್ದಾರೆ. ಆದರೆ ದೇಸಿ ತುಪ್ಪ ಹೊಂದಿದ ಸಾಮಾನ್ಯ ಆಹಾರವು ನನ್ನ ಮುಷ್ಠಿಗಳಲ್ಲಿ ಸಾಕಷ್ಟು ಶಕ್ತಿ ತುಂಬಿ ಅವರನ್ನು ಸೋಲಿಸಲು ಸಾಕಾಗುತ್ತದೆ ಎಂದು ಮ್ಯಾಂಚೆಸ್ಟರ್‌ನಲ್ಲಿ ವಿಜೇಂದರ್ ತಿರುಗೇಟು ನೀಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ