ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಂಕಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಎಂದಿನ ಫಾರ್ಮ್ ಪ್ರದರ್ಶಿಸಿ ಅಜೇಯ 73 ರನ್ ಗಳಿಸಿದರು.
ಟಾಸ್ ಗೆದ್ದು ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಈ ಮೊತ್ತವನ್ನು ಭಾರತ 17.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 166 ರನ್ ಗಳಿಸುವ ಮೂಲಕ ಗೆಲುವು ದಾಖಲಿಸಿತು.
ಭಾರತದ ಪರ ಬ್ಯಾಟಿಂಗ್ ನಲ್ಲಿ ಕೆಎಲ್ ರಾಹುಲ್ ಮತ್ತೆ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ಆರಂಭದಲ್ಲೇ ಸಿಕ್ಕ ಈ ಆಘಾತವನ್ನು ಮೆಟ್ಟಿ ನಿಂತ ಯುವ ಬ್ಯಾಟ್ಸ್ ಮನ್ ಇಶಾನ್ ಕಿಶನ್, ವಿರಾಟ್ ಕೊಹ್ಲಿ ಜೋಡಿ ಇಂಗ್ಲೆಂಡ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿತು. ಕಿಶನ್ ಚೊಚ್ಚಲ ಪಂದ್ಯದಲ್ಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ಗಳಿಸಿದರು. ಅವರು 4 ಸಿಕ್ಸರ್, 5 ಬೌಂಡರಿ ಸಹಿತ 32 ಎಸೆತಗಳಲ್ಲಿ 56 ರನ್ ಸಿಡಿಸಿ ಔಟಾದರು.
ಇನ್ನೊಂದೆಡೆ ವಿರಾಟ್ ಕೊಹ್ಲಿ ಕೊನೆಯವರೆಗೂ ಅಜೇಯರಾಗುಳಿದು 49 ಎಸೆತಗಳಲ್ಲಿ 73 ರನ್ ಗಳಿಸಿದರು. ರಿಷಬ್ ಪಂತ್ 13 ಎಸೆತಗಳಲ್ಲಿ 26 ರನ್ ಗಳಿಸಿ ಬಂದಷ್ಟೇ ವೇಗವಾಗಿ ನಿರ್ಗಮಿಸಿದರು. ಶ್ರೇಯಸ್ ಐಯರ್ ಅಜೆಯ 8 ರನ್ ಗಳಿಸಿದರು.