‘ವಿರಾಟ’ ಪರ್ವದ ಮೊದಲ ಅಧ್ಯಾಯವನ್ನೇ ಅದ್ಭುತವಾಗಿ ಬರೆದ ಕೊಹ್ಲಿ

ಕೃಷ್ಣವೇಣಿ ಕೆ

ಭಾನುವಾರ, 15 ಜನವರಿ 2017 (21:21 IST)
ಪುಣೆ: ಅದೊಂದು ಕಾಲವಿತ್ತು. ಟೀಂ ಇಂಡಿಯಾ 60 ರನ್  ಗಳಿಸುವಷ್ಟರಲ್ಲಿ 4 ವಿಕೆಟ್ ಉದುರಿಸಿಕೊಂಡಿತೆಂದರೆ ರೇಡಿಯೋ, ಟಿವಿ ಆಫ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದೆವು. ಆದರೆ ಈ ವಿರಾಟ್ ಪರ್ವದಲ್ಲಿ ಹಾಗೆ ಮಾಡುವ ಹಾಗಿಲ್ಲ ಎಂದು ಕೊಹ್ಲಿ  ತೋರಿಸಿಕೊಟ್ಟಿದ್ದಾರೆ.


ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 350 ರನ್ ರಾಶಿ ಹಾಕಿದಾಗ ಗೆಲುವು ಸುಲಭವಲ್ಲ ಎಂದು ಅನಿಸಿತ್ತಷ್ಟೆ. ಆದರೆ 100 ರನ್ ಗಳಿಸುವ ಮೊದಲೇ ಪ್ರಮುಖರೆಲ್ಲಾ ಪೆವಿಲಿಯನ್ ನಲ್ಲಿ ಕೂತಾಗ ಇನ್ನು  ಹೀನಾಯವಾಗಿ ಸೋಲದಿದ್ದರೆ ಸಾಕು ಎನಿಸಿತ್ತು. ಆದರೆ ತವರಿನ ಹುಡುಗ ಕೇದಾರ್ ಜಾದವ್ ಜತೆ ಸೇರಿಕೊಂಡು ನಾಯಕ ಕೊಹ್ಲಿ ಕಟ್ಟಿದ ಇನಿಂಗ್ಸ್ ಒಂದು ಪಂದ್ಯವನ್ನು ಹೇಗೆ ಚೇಸ್ ಮಾಡಬೇಕು ಎಂದು ಕ್ರಿಕೆಟ್ ಪಾಠದ ಪುಸ್ತಕ ಬರೆದಂತಿತ್ತು.

ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ಬಾಲ್ ತಿನ್ನುತ್ತಾ ಕೂರಬೇಡ ಮುನ್ನುಗ್ಗಿ ಹೊಡಿ ಎಂದೇ ಜಾದವ್ ಗೆ ಕೂಗಿ ಹೇಳುತ್ತಿದ್ದರು ಕೊಹ್ಲಿ. ಯಾಕೆಂದರೆ ಅವರಿಗೆ ಚೆನ್ನಾಗಿ ಗೊತ್ತಿತ್ತು. ರನ್ ತೀರಾ ಹಿಂದೆ ಬಿದ್ದರೆ ವಿಕೆಟ್ ಉಳಿಸಿಕೊಳ್ಳುವುದರ ಜತೆಗೆ ಈ ಒತ್ತಡವನ್ನೂ ನಿಭಾಯಿಸಬೇಕೆಂದು. ಅದಕ್ಕೇ ಪ್ರತೀ ಓವರ್ ಗೆ ಒಂದು ಬೌಂಡರಿ ಉಳಿದದ್ದು ಸಿಂಗಲ್ಸ್ ತೆಗೆದು ರನ್ ರೇಟ್ ಉತ್ತಮವಾಗಿ ನಿಭಾಯಿಸಿದರು.

ಪ್ರತಿಫಲವಾಗಿ ನೋಡ ನೋಡುತ್ತಿದ್ದಂತೆ ಇಬ್ಬರೂ 200 ರನ್ ಗಳ ಜತೆಯಾಟ ನಿಭಾಯಿಸಿಯೇ ಬಿಟ್ಟರು. ಆದರೆ ದುರದೃಷ್ಟವಶಾತ್ ಕೊಹ್ಲಿ ಶತಕ (122) ಗಳಿಸಿ ಮಧ್ಯದಲ್ಲೇ ಔಟಾದರು. ಆದರೆ ಜಾದವ್ 63 ಬಾಲ್ ಗಳಲ್ಲಿ ವೇಗದ ಶತಕ ದಾಖಲಿಸಿ ಆಸೆ ಜೀವಂತವಾಗಿರಿಸಿದರು.

ಆದರೆ ಕೊಹ್ಲಿ ಹೋದ ಕೆಲ ಹೊತ್ತಿನಲ್ಲೇ ಅವರೂ 120 ರನ್ ಗಳಿಸಿ ಔಟಾದರು. ಕೊನೆಗೆ ಆಲ್ ರೌಂಡರ್ ಗಳ ಆಟ. ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಚೆನ್ನಾಗಿ ಆಡುತ್ತಿರುವಾಗಲೇ ಜಡೇಜಾ ವಿಕೆಟ್ ಒಪ್ಪಿಸಿದರು. ನಂತರ ಬಂದ ರವಿಚಂದ್ರನ್ ಅಶ್ವಿನ್ ಬಾಲ್ ನಿಂದ ಇಂದಿನ ಪಂದ್ಯದಲ್ಲಿ ಮಾಡಲಾಗದ ಮ್ಯಾಜಿಕ್ ನ್ನು ಬ್ಯಾಟಿಂಗ್ ನಿಂದ ಮಾಡಿದರು. ಭಾರತ 3 ವಿಕೆಟ್ ಗಳಿಂದ ಗೆಲುವು ದಾಖಲಿಸಿತು. ಅಂತೂ ವಿರಾಟ ಪರ್ವದ ಮೊದಲ ಅಧ್ಯಾಯ ಸುಂದರವಾಗಿ ಮುಗಿಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ