ಲಲಿತ್ ಮೋದಿ ವಿರುದ್ಧ ಕಾನೂನು ಕ್ರಮಕ್ಕೆ ಪರಿಶೀಲನೆ : ರೈನಾ

ಗುರುವಾರ, 2 ಜುಲೈ 2015 (19:07 IST)
ಉದ್ಯಮಿಯೊಬ್ಬರಿಂದ ಹಣ ಸ್ವೀಕರಿಸಿದ್ದಾರೆಂಬ ಲಲಿತ್ ಮೋದಿ ಅವರ ಆರೋಪಗಳನ್ನು ತಳ್ಳಿಹಾಕಿದ ಭಾರತದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಮಾಜಿ ಐಪಿಎಲ್ ಕಮೀಷನರ್ ಲಲಿತ್ ಮೋದಿ  ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ಪರಿಶೀಲಿಸುತ್ತಿರುವುದಾಗಿ ಹೇಳಿದರು.
 
ಇತ್ತೀಚಿನ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ತಾವು ಸರಿಯಾದ ಕ್ರೀಡಾ ಮನೋಭಾವದಿಂದ ಮತ್ತು ಪ್ರಾಮಾಣಿಕತೆಯಿಂದ ಆಟವನ್ನು ಆಡಿದ್ದೇನೆಂದು ನನ್ನ ಅಭಿಮಾನಿಗಳಿಗೆ ತಿಳಿಸಲು ಬಯಸುತ್ತೇನೆ ಎಂದು ರೈನಾ ಸಹಯೋಗ ಹೊಂದಿರುವ ಸ್ಫೋರ್ಟ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆ ರಿತಿ ಸ್ಫೋರ್ಟ್ಸ್ ರೈನಾ ಹೇಳಿಕೆ ಉಲ್ಲೇಖಿಸಿ ಬಿಡುಗಡೆ ಮಾಡಿದೆ.  ಯಾವುದೇ ತಂಡವನ್ನು ಪ್ರತಿನಿಧಿಸಿದರೂ ಕ್ರಿಕೆಟ್ ಆಡುವುದು ನನ್ನ ಅಭಿಲಾಷೆಯಾಗಿದೆ. ಈ ಬಗ್ಗೆ ತಾವು ಕಾನೂನು ಕ್ರಮದ ಬಗ್ಗೆ ಪರಿಶೀಲಿಸುತ್ತಿರುವುದಾಗಿ ರೈನಾ ಹೇಳಿದರು.
 
ಇಬ್ಬರು ಭಾರತೀಯ ಕ್ರಿಕೆಟ್ ಆಟಗಾರರು ಮತ್ತು ವೆಸ್ಟ್ ಇಂಡಿಯನ್ ಆಟಗಾರನಿಗೆ ಭಾರತದ ಸ್ಥಿರಾಸ್ತಿ ಉದ್ಯಮಿ ಲಂಚ ನೀಡಿದ್ದಾರೆಂದು ಲಲಿತ್ ಮೋದಿ ಐಸಿಸಿಗೆ ಬರೆದಿದ್ದ ಪತ್ರದಲ್ಲಿ  ಆರೋಪಿಸಿದ್ದರು. 
 
ಮೋದಿ ಬಳಿಕ ಆಟಗಾರರ ಹೆಸರನ್ನು ಕೂಡ ಹೇಳಿದ್ದು, ಸ್ಥಿರಾಸ್ತಿ ಉದ್ಯಮಿ ಜೊತೆ ಮೂವರು ಆಟಗಾರರು ನಿಕಟ ಸಂಪರ್ಕವಿರಿಸಿಕೊಂಡಿದ್ದರು ಎಂದು ಮೋದಿ ದೂರಿದ್ದರು. 
ಪತ್ರವನ್ನು ಸ್ವೀಕರಿಸಿರುವುದಾಗಿ ಐಸಿಸಿ ಹೇಳಿದ್ದು, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಕಂಡುಬರದಿರುವುದರಿಂದ ಕ್ಲೀನ್ ಚಿಟ್ ನೀಡಿರುವುದಾಗಿ ತಿಳಿಸಿದೆ. ಬಿಸಿಸಿಐ ಕೂಡ ಆಟಗಾರರಿಗೆ ಕ್ಲೀನ್ ಚಿಟ್ ನೀಡಿದೆ.

ವೆಬ್ದುನಿಯಾವನ್ನು ಓದಿ