ಬಾಂಗ್ಲಾದೇಶ ವಿರುದ್ಧ ಇತ್ತೀಚೆಗೆ ಟೀಂ ಇಂಡಿಯಾ ಕೊನೆಯ ಎರಡು ದಿನದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಡ್ರಾ ಆಗುತ್ತಿದ್ದ ಪಂದ್ಯವನ್ನು ಗೆದ್ದು ಬೀಗಿತ್ತು. ಇದೇ ರೀತಿ ಇಂಗ್ಲೆಂಡ್ ಕೂಡಾ ಬೇಝ್ ಬಾಲ್ ಆಟವಾಡುತ್ತದೆ. ಪರಿಸ್ಥಿತಿ ಏನೇ ಇರಲಿ, ಆಕ್ರಮಣಕಾರೀ ಆಟದ ಮೂಲಕ ಎದುರಾಳಿಯನ್ನು ಕಟ್ಟಿಹಾಕುವುದು ಇದರ ತಂತ್ರ.
ಇದೀಗ ಭಾರತ ಗಮ್ ಬಾಲ್ ಎನ್ನುವ ಹೊಸ ಶೈಲಿಯನ್ನು ಅಳವಡಿಸಿಕೊಂಡಿದೆ. ಇದನ್ನು ಹುಟ್ಟು ಹಾಕಿರುವುದು ನೂತನ ಕೋಚ್ ಗೌತಮ್ ಗಂಭೀರ್. ಅವರ ಹೆಸರಿನ ಅಕ್ಷರವನ್ನೇ ಬಳಸಿಕೊಂಡು ಇದನ್ನು ಗಮ್ ಬಾಲ್ ಎನ್ನಲಾಗುತ್ತಿದೆ. ಗೌತಮ್ ಗಂಭೀರ್ ಟೀಂ ಇಂಡಿಯಾದಲ್ಲಿ ನಿರ್ಭೀತ ಕ್ರಿಕೆಟ್ ಶೈಲಿಯನ್ನು ಅಳವಡಿಸಿಕೊಳ್ಳುವ ಯೋಜನೆ ರೂಪಿಸಿದ್ದಾರೆ. ಅದರ ಫಲವೇ ಈಗ ಬಾಂಗ್ಲಾದೇಶ ವಿರುದ್ಧ ಎರಡನೇ ಪಂದ್ಯದಲ್ಲಿ ಗೆಲುವು ದಕ್ಕಿರುವುದು.
ಈ ರೀತಿಯ ಶೈಲಿಯ ಆಟಕ್ಕೆ ಈಗ ಟೀಂ ಇಂಡಿಯಾದಲ್ಲಿ ಗಮ್ ಬಾಲ್ ಎಂದು ಹೆಸರಿಡಲಾಗಿದೆ. ಔಟ್ ಆಗುವುದರ ಬಗ್ಗೆ ಚಿಂತೆಯಿಲ್ಲದೇ ಗೆಲುವನ್ನೇ ಗುರಿಯಾಗಿಸಿ ಬ್ಯಾಟಿಂಗ್ ಮಾಡುವುದು ಇದರ ತಂತ್ರವಾಗಿದೆ. ಇಲ್ಲಿ ಯಾವುದೇ ಆಟಗಾರನ ವೈಯಕ್ತಿಕ ಮೈಲಿಗಲ್ಲುಗಳು ಮುಖ್ಯವಾಗುವುದಿಲ್ಲ. ಇಡೀ ತಂಡವಾಗಿ ಪ್ರತೀ ಪಂದ್ಯವನ್ನು ಗೆಲ್ಲುವುದೇ ಗುರಿಯಾಗಿರುತ್ತದೆ. ಇದರಿಂದ ಟೆಸ್ಟ್ ಕ್ರಿಕೆಟ್ ಹೆಚ್ಚು ಆಸಕ್ತಿದಾಯಕವಾಗಲಿದೆ. ಭಾರತ ಈ ಹೊಸ ಶೈಲಿಯಲ್ಲಿ ಮೊದಲ ಬಾರಿಗೆ ಯಶಸ್ಸು ಕಂಡಿದೆ. ಮುಂದೆ ಈ ಶೈಲಿಯನ್ನು ಮುಂದುವರಿಸುತ್ತಾ ನೋಡಬೇಕಿದೆ.