ನ್ಯೂಯಾರ್ಕ್: ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಭಾರತ ತಂಡದ ಕಾಂಬಿನೇಷನ್ ಬಗ್ಗೆ ಚರ್ಚೆ ಶುರುವಾಗಿದೆ. ಅದರಲ್ಲೂ ಟಿ20 ಮಾದರಿಯಲ್ಲಿ ಭಾರತ ತಂಡದ ಆರಂಭಿಕರಾಗಿ ಯಾರಾದರೆ ಸೂಕ್ತ ಎಂಬ ಚರ್ಚೆಯಾಗುತ್ತಿದೆ.
ಟೀಂ ಇಂಡಿಯಾ ಆರಂಭಿಕ ಸ್ಥಾನಕ್ಕೆ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಜೊತೆಗೆ ವಿರಾಟ್ ಕೊಹ್ಲಿ ಹೆಸರೂ ಕೇಳಿಬರುತ್ತಿದೆ. ಇತ್ತೀಚೆಗಿನ ಟಿ20 ಸರಣಿಗಳಲ್ಲಿ ಯಶಸ್ವಿ ಜೈಸ್ವಾಲ್ ಕ್ಲಿಕ್ ಆದ ಮೇಲೆ ರೋಹಿತ್ ಜೊತೆಗೆ ಅವರೇ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದಾರೆ.
ಆದರೆ ಅದಕ್ಕೆ ಮೊದಲು ರೋಹಿತ್-ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದೂ ಇದೆ. ಟಿ20 ಮಾದರಿಯಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ತಮ್ಮನ್ನ ತಾವು ಪ್ರೂವ್ ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಅವರು ಖಾಯಂ ಆರಂಭಿಕ.
ಹೀಗಾಗಿ ಟಿ20 ವಿಶ್ವಕಪ್ ನಲ್ಲೂ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಬೇಕು ಎಂದು ಒತ್ತಾಯ ಮಾಡುವವರಿದ್ದಾರೆ. ಆದರೆ ರಾಷ್ಟ್ರೀಯ ತಂಡದ ಪರ ಕೊಹ್ಲಿ ಹೆಚ್ಚು ಕ್ಲಿಕ್ ಆಗಿದ್ದು ಮೂರನೇ ಕ್ರಮಾಂಕದಲ್ಲಿ. ಕೆಳ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಗೇರ್ ಬದಲಾಯಿಸಲು ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್/ಸಂಜು ಸ್ಯಾಮ್ಸನ್ ಇರುವುದರಿಂದ ಕೊಹ್ಲಿ ಮೂರನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಗಿಳಿಯುವ ಸಾಧ್ಯತೆ ಹೆಚ್ಚು.
ಆದರೆ ಟಿ20 ಕ್ರಿಕೆಟ್ ಮಾದರಿಯಲ್ಲಿ ಭಾರತ ತಂಡದ ಪರ ಕೊಹ್ಲಿ 2022 ರ ಏಷ್ಯಾ ಕಪ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಶತಕ ಗಳಿಸಿದ್ದೂ ಇದೆ. ಒಟ್ಟು 9 ಇನಿಂಗ್ಸ್ ಆಡಿರುವ ಕೊಹ್ಲಿ ಆರಂಭಿಕರಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 400 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ ಗಮನಿಸಿದರೆ ಮೂರನೇ ಕ್ರಮಾಂಕಕ್ಕಿಂತಲೂ ಆರಂಭಿಕರಾಗಿ ಟಿ20 ಕ್ರಿಕೆಟ್ ನಲ್ಲಿ ಕೊಹ್ಲಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್ ಕೂಡಾ ಆರಂಭಿಕರಾಗಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಕೊಹ್ಲಿ ಯಾವ ಕ್ರಮಾಂಕ ಕೊಟ್ಟರೂ ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಬಲ್ಲ ಅನುಭವಿ. ಹೀಗಾಗಿ ಆರಂಭಿಕ ಪಂದ್ಯದಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಆಡಲಿಳಿದು ಅಗತ್ಯ ಬಂದರೆ ಮಾತ್ರ ಅಗ್ರ ಕ್ರಮಾಂಕಕ್ಕೇರುವ ಸಾಧ್ಯತೆಯಿದೆ.