ಅನಿರೀಕ್ಷಿತವಾಗಿ ಶಾಕ್ ಕೊಡುವ ಬಾಂಗ್ಲಾದೇಶ ಟೀಂ ಇಂಡಿಯಾಕ್ಕೆ ಸವಾಲಾಗಬಹುದೇ?

ಕೃಷ್ಣವೇಣಿ ಕೆ

ಗುರುವಾರ, 15 ಜೂನ್ 2017 (06:47 IST)
ಲಂಡನ್: ಕ್ರಿಕೆಟ್ ನಲ್ಲಿ ಯಾವ ತಂಡವನ್ನೂ ಹಗುರವಾಗಿ ಕಾಣಬಾರದು ಎಂದು ಭಾರತ ಪಾಠ ಕಲಿತಿದ್ದು ಬಹುಶಃ ಬಾಂಗ್ಲಾದೇಶವನ್ನು ನೋಡಿಯೇ ಇರಬೇಕು. ಅನಿರೀಕ್ಷಿತ ಸಂದರ್ಭಗಳಲ್ಲಿ ಭಾರತಕ್ಕೆ ಶಾಕ್ ಕೊಟ್ಟ ಕೀರ್ತಿ ಬಾಂಗ್ಲಾದ್ದು.

 
ಇದೀಗ  ಅದೇ ತಂಡದ ಎದುರು ಬಲಿಷ್ಠ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಆಡಲಿದೆ. ಏಷ್ಯಾ ಕಪ್, ವಿಶ್ವಕಪ್ ಗಳಲ್ಲಿ ಭಾರತ-ಬಾಂಗ್ಲಾ ಎದುರುಬದುರಾಗಿವೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದೇ ಮೊದಲ ಬಾರಿಗೆ ಪರಸ್ಪರ ಸೆಣಸುತ್ತಿದೆ.

ಅದೃಷ್ಟದ ಬಲದಿಂದ ಸೆಮಿಫೈನಲ್ ಪ್ರವೇಶಿಸಿದರೂ ಬಾಂಗ್ಲಾ ತಂಡವನ್ನು ಅಷ್ಟು ಹಗುರವಾಗಿ ಕಾಣಲು ಸಾಧ್ಯವಿಲ್ಲ. ಅವರಲ್ಲಿನ್ನೂ ಅನಿರೀಕ್ಷಿತ ಅಚ್ಚರಿ ನೀಡುವ ತಾಕತ್ತಿದೆ ಎನ್ನುವುದಕ್ಕೆ ಇದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿದ ಪರಿ ಸಾಕ್ಷಿ.

ಆಡಿ ಆಡಿ ಉತ್ತಮರಾದ ತಂಡಗಳಲ್ಲಿ ಬಾಂಗ್ಲಾದೇಶವೂ ಒಂದು. ಮೊದಲೆಲ್ಲಾ ಒತ್ತಡಗಳನ್ನು ನಿಭಾಯಿಸುವುದು ಅವರಿಗೆ ಗೊತ್ತಿಲ್ಲ ಎಂಬ ಭಾವನೆಯಿತ್ತು. ಆದರೆ ಈಗ ಮನಸ್ಸು ಮಾಡಿದರೆ ನಿಂತು ಆಡಲೂ ಅವರು ಸಮರ್ಥರು. ಹಾಗಾಗಿ ಭಾರತ ಮೈಮರೆಯಬಾರದು.

ಮೇಲ್ನೋಟಕ್ಕೆ ಬಲಿಷ್ಠವಾಗಿದ್ದರೂ, ಯಾವ ತಂಡವನ್ನೂ ಹಗುರವಾಗಿ ಕಾಣುವಂತಿಲ್ಲ ಎಂಬ ಪಾಠವನ್ನು ಟೀಂ ಇಂಡಿಯಾ ಲಂಕಾ ವಿರುದ್ಧವೇ ಕಲಿತಿದೆ. ಕಳೆದ ಪಂದ್ಯದಲ್ಲಿ ಭಾರತ ತಂಡ ಮಾಡಿದ್ದ ಬೌಲಿಂಗ್ ಬದಲಾವಣೆ ಲಾಭ ತಂದಿದೆ.

ಆದರೆ ನಿಖರವಾಗಿ ಲೈನ್ ಆಂಡ್ ಲೆಂಗ್ತ್ ಕಾಯ್ದುಕೊಳ್ಳಲು ಭಾರತೀಯ ಬೌಲರ್ ಗಳು ಇನ್ನೂ  ಕೆಲವೊಮ್ಮೆ ಪರದಾಡುತ್ತಿದ್ದಾರೆ. ಬ್ಯಾಟಿಂಗ್ ವಿಭಾಗದ ಬಗ್ಗೆ ಬಹುಶಃ ಭಾರತ ಹೆಚ್ಚು ತಲೆಕೆಡಿಸಿಕೊಂಡಿರದು. ಎಲ್ಲಾ ಬ್ಯಾಟ್ಸ್ ಮನ್ ಗಳು ಇದುವರೆಗೆ ಉತ್ತಮ ಫಾರ್ಮ್ ತೋರಿದ್ದಾರೆ.

ಆದರೆ ಮೊದಲು ಬ್ಯಾಟಿಂಗ್ ಮಾಡುವಾಗ ಭಾರತ ತನ್ನ ಸ್ಟ್ರಾಟಜಿ ಬದಲಿಸಬೇಕಿದೆ. ಆರಂಭಿಕರು ಕೊಂಚ ವೇಗವಾಗಿ ರನ್ ಗಳಿಸದಿದ್ದರೆ ದೊಡ್ಡ ಮೊತ್ತ ಗಳಿಸುವುದು ಕಷ್ಟ. ಯಾಕೆಂದರೆ ಬಾಂಗ್ಲಾ ಹುಡುಗರೂ ಭಾರತೀಯರಂತೆ ಚೇಸಿಂಗ್ ಮಾಡಲು ಉತ್ತಮರೇ.

ಮಳೆಯ ಚಿಂತೆ ಸೆಮಿಫೈನಲ್ ಗೆ ಕಾಡದು. ಯಾಕೆಂದರೆ ಪಂದ್ಯ ಟೈ ಆದರೆ ಸೂಪರ್ ಓವರ್ ಇದ್ದೇ ಇದೆಯಲ್ಲಾ? ಹಾಗಿದ್ದರೂ, ಮೈಮರೆಯದೆ ಎಚ್ಚರಿಕೆಯ ಆಟವಾಡಿ ಮೂರನೇ ಬಾರಿಗೆ ಫೈನಲ್ ತಲುಪಲು ಎಲ್ಲಾ ಪ್ರಯತ್ನ ನಡೆಸಬೇಕಿದೆ.

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸಮಯ: ಅಪರಾಹ್ನ 3.00
ಮೈದಾನ: ಎಡ್ಜ್ ಬಾಸ್ಟನ್

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ