ಆಸಿಸ್ ವೇಗಿಗಳ ಮಾರಕ ಬೌಲಿಂಗ್ ದಾಳಿ: ನ್ಯೂಜಿಲೆಂಡ್ 183ಕ್ಕೆ ಸರ್ವಪತನ

ಭಾನುವಾರ, 29 ಮಾರ್ಚ್ 2015 (12:40 IST)
ಮೆಲ್ಬರ್ನ್: ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ  ನ್ಯೂಜಿಲೆಂಡ್ ಆಸಿಸ್ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು  183  ರನ್ ಸ್ಕೋರ್ ಮಾಡಿದೆ.  ನ್ಯೂಜಿಲೆಂಡ್ ಆರಂಭದಲ್ಲಿ ಮೂರು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.  ಮಾರ್ಟಿನ್ ಗುಪ್ಟಿಲ್ 15 ರನ್, ಮೆಕಲಮ್ 0 ಮತ್ತು ವಿಲಿಯಂಸನ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ  ರೋಸ್ ಟೇಲರ್ ಮತ್ತು  ಗ್ರಾಂಟ್ ಎಲಿಯಟ್ ಎಚ್ಚರಿಕೆಯ ಉತ್ತಮ ಜೊತೆಯಾಟವಾಡಿದರು.  ರೋಸ್ ಟೇಲರ್ 72 ಎಸೆತಗಳಲ್ಲಿ 40 ರನ್ ಗಳಿಸಿದರು ಮತ್ತು ಎಲಿಯಟ್ 82 ಎಸೆತಗಳಲ್ಲಿ 83 ರನ್ ಗಳಿಸಿ ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ಮೊತ್ತವನ್ನು ಕಲೆಹಾಕುವ ಭರವಸೆ ಮೂಡಿಸಿದ್ದರು.

ಆದರೆ ತಂಡದ ಸ್ಕೋರ್ 150 ರನ್‌ಗಳಾಗಿದ್ದಾಗ ಟೇಲರ್ ಫಾಲ್ಕನರ್ ಬೌಲಿಂಗ್‌ನಲ್ಲಿ ಹ್ಯಾಡಿನ್‌ಗೆ ಕ್ಯಾಚಿತ್ತು ಔಟಾದರು.  ಟೇಲರ್ ಮತ್ತು ಎಲಿಯಟ್ ಜೊತೆಯಾಟದಲ್ಲಿ 111 ರನ್ ಕಲೆಹಾಕಿದ್ದರು.  ಟೇಲರ್ ಔಟಾದ ಬಳಿಕ ನ್ಯೂಜಿಲೆಂಡ್ ವಿಕೆಟ್‌ಗಳು ಬೇಗನೇ ಉರುಳತೊಡಗಿದವು. ಅದೇ ಓವರಿನಲ್ಲಿ ಆಂಡರ್‌ಸನ್ ಕೂಡ ಫಾಲ್ಕನರ್‌ಗೆ ಶೂನ್ಯಕ್ಕೆ  ಬೌಲ್ಡ್ ಆದರು. ಮುಂದಿನ ಓವರಿನಲ್ಲೇ ಲ್ಯೂಕ್ ರಾಂಚಿ ಸ್ಟಾರ್ಕ್ ಬೌಲಿಂಗ್‌ನಲ್ಲಿ ಕ್ಲಾರ್ಕ್‌ಗೆ ಕ್ಯಾಚಿತ್ತು ಶೂನ್ಯಕ್ಕೆ ಔಟಾದರು.

 ಡೇನಿಯಲ್ ವೆಟ್ಟೋರಿ  ಜಾನ್ಸನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಅವರು 21 ಎಸೆತಗಳ್ಲಿ 9 ರನ್ ಗಳಿಸಿದ್ದರು. ಮುಂದಿನ ಓವರಿನಲ್ಲಿ ಎಲಿಯಟ್ ಫಾಲ್ಕನರ್ ಎಸೆತಕ್ಕೆ ಹ್ಯಾಡಿನ್‌ಗೆ ಕ್ಯಾಚಿತ್ತು ಔಟಾದರು. ಎಲಿಯಟ್ 82 ಎಸೆತಗಳಲ್ಲಿ 83 ರನ್ ಸ್ಕೋರ್ ಮಾಡಿದ್ದು ಅವರ ಸ್ಕೋರಿನಲ್ಲಿ 7 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇತ್ತು.  ಮ್ಯಾಟ್ ಹೆನ್ರಿ ಜಾನ್ಸನ್ ಬೌಲಿಂಗ್‌ನಲ್ಲಿ ಸ್ಟಾರ್ಕ್‌ಗೆ ಕ್ಯಾಚಿತ್ತು ಔಟಾದರು.

 ನಂತರ ಮ್ಯಾಕ್ಸವೆಲ್ ವಿಕೆಟ್‌ಗೆ ಎಸೆದ ನೇರ ಗುರಿಯಿಂದ ಟಿಮ್ ಸೌತೀ ರನೌಟ್‌ಗೆ ಬಲಿಯಾದ್ದರಿಂದ ನ್ಯೂಜಿಲೆಂಡ್ 45 ಓವರುಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 183 ರನ್‌ಗಳಿಗೆ ಪತನಗೊಂಡಿದೆ.  ಆಸ್ಟ್ರೇಲಿಯಾ ಪರ ವೇಗಿಗಳು ಮಾರಕ ಬೌಲಿಂಗ್ ದಾಳಿ ಮಾಡಿದ್ದು, ಫಾಕ್ನರ್ ಅವರು 9 ಓವರುಗಳಲ್ಲಿ 36 ರನ್ ನೀಡಿ 3 ವಿಕೆಟ್ ಕಬಳಿಸಿದರು.  ಮಿಚೆಲ್ ಜಾನ್ಸನ್ 9 ಓವರುಗಳಲ್ಲಿ 30 ರನ್ ನೀಡಿ 3 ವಿಕೆಟ್ ಕಬಳಿಸಿದರು ಹಾಗೂ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕಬಳಿಸಿದರು. ಮ್ಯಾಕ್ಸ್‌ವೆಲ್ 1 ವಿಕೆಟ್ ಪಡೆದರು. 

ವೆಬ್ದುನಿಯಾವನ್ನು ಓದಿ