ಡಬ್ಲ್ಯುಪಿಎಲ್ ಫೈನಲ್: ಸ್ಮೃತಿ ಮಂಧಾನಗೆ ಕನ್ನಡ ಕಲಿಸಿಕೊಟ್ಟ ಶ್ರೇಯಾಂಕ ಪಾಟೀಲ್

Krishnaveni K

ಸೋಮವಾರ, 18 ಮಾರ್ಚ್ 2024 (07:27 IST)
ದೆಹಲಿ: ಡಬ್ಲ್ಯುಪಿಎಲ್ ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅದ್ಭುತ ಗೆಲುವಿನ ನಂತರ ನಾಯಕಿ ಸ್ಮೃತಿ ಮಂಧಾನ ಕನ್ನಡದಲ್ಲೇ ಅಭಿಮಾನಿಗಳಿಗೆ ಒಂದು ಸಾಲು ಹೇಳಿ ಧನ್ಯವಾದ ಸಲ್ಲಿಸಿದ್ದಾರೆ.

ಅಷ್ಟಕ್ಕೂ ಸ್ಮೃತಿ ಮಂಧಾನ ತಪ್ಪಿಲ್ಲದೇ ಕನ್ನಡದಲ್ಲಿ ಈ ಮಾತು ಹೇಳಲು ಕಾರಣ ಆರ್ ಸಿಬಿ ತಂಡದಲ್ಲಿರುವ ಕನ್ನಡತಿ ಶ್ರೇಯಾಂಕ ಪಾಟೀಲ್. ಫೈನಲ್ ಗೆಲುವಿನ ಖುಷಿಯಲ್ಲಿ ನಾಯಕಿ ಸ್ಮೃತಿ ಮಂಧಾನ ಕೊನೆಯದಾಗಿ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಹೇಳುವುದನ್ನು ಮರೆಯಲಿಲ್ಲ.

‘ನಾನು ಅಭಿಮಾನಿಗಳ ಬೆಂಬಲವನ್ನು ಮರೆಯುವಂತೆಯೇ ಇಲ್ಲ. ಅಭಿಮಾನಿಗಳಿಗೆ ನನ್ನದೊಂದು ವಿಶೇಷ ಸಂದೇಶವಿದೆ. ಪ್ರತೀ ಸಲ ಅವರು ನಮ್ಮನ್ನು ಈ ಸಲ ಕಪ್ ನಮ್ದೇ ಎಂದು ಹುರಿದುಂಬಿಸುತ್ತಾರೆ. ಆದರೆ ಈ ಬಾರಿ ನಾವು ಅವರಿಗೆ ‘ಈ ಸಲ ಕಪ್ ನಮ್ದು’ ಎಂದು ಹೇಳಬೇಕಿದೆ’ ಎಂದು ಕನ್ನಡದಲ್ಲೇ ಹೇಳುವ ಮೂಲಕ ಕನ್ನಡಿಗರ ಮನ ಗೆದ್ದರು.

ಸ್ಮೃತಿ ಮಂಧಾನ ಕನ್ನಡದಲ್ಲಿ ಈ ಸಾಲು ಹೇಳಿದ ಬಳಿಕೆ ‘ನನಗೆ ಕನ್ನಡ ಭಾಷೆ ಗೊತ್ತಿಲ್ಲ. ಆದರೆ ಈವತ್ತು ಈ ಸಾಲುಗಳನ್ನು ಹೇಳಿಕೊಟ್ಟಿದ್ದು ನನ್ನ ತಂಡದ ಸಹ ಆಟಗಾರ್ತಿಯರು. ಅವರು ಹೇಳಿಕೊಟ್ಟಿದ್ದನ್ನು ತಪ್ಪಿಲ್ಲದೇ ಹೇಳಲು ನನಗೋಸ್ಕರ ಪ್ರಾರ್ಥನೆ ಮಾಡಿ ಎಂದು ಹೇಳಿ ಬಂದಿದ್ದೆ’ ಎಂದು ಶ್ರೇಯಾಂಕ ಕಡೆಗೆ ನೋಡಿ ನಕ್ಕರು. ಸ್ಮೃತಿ ಬಾಯಿಯಲ್ಲಿ ಕನ್ನಡ ಸಾಲುಗಳನ್ನು ಕೇಳಿ ಶ್ರೇಯಾಂಕ ಕುಣಿದು ಕುಪ್ಪಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ