ಕೊಹ್ಲಿ, ಅನುಷ್ಕಾರನ್ನು ಟ್ವಿಟರ್‌ನಲ್ಲಿ ಸಮರ್ಥಿಸಿಕೊಂಡ ಯುವರಾಜ್ ಸಿಂಗ್

ಮಂಗಳವಾರ, 31 ಮಾರ್ಚ್ 2015 (11:23 IST)
ಸ್ಫೋಟಕ ಬ್ಯಾಟ್ಸ್‌ಮನ್  ಯುವರಾಜ್ ಸಿಂಗ್  ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ಅವರ ಗೆಳತಿ ಅನುಷ್ಕಾ ಶರ್ಮಾ ಅವರನ್ನು ಟ್ವಿಟರ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ. ಕೊಹ್ಲಿ ಮತ್ತು ಅವರ ಗೆಳತಿ ಅನುಷ್ಕಾ ಶರ್ಮಾ ಅವರ ವೈಯಕ್ತಿಕ ಜೀವನವನ್ನು ಗೌರವಿಸುವಂತೆ ಅವರು ಕ್ರಿಕೆಟ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 
 
ವಿರಾಟ್ ಕೊಹ್ಲಿ ನಿರ್ಣಾಯಕ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇವಲ ಒಂದು ರನ್ ಮಾಡಿದ್ದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅನುಷ್ಕಾ ಹಾಜರಿದ್ದುದರಿಂದ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿಯ ವೈಫಲ್ಯಕ್ಕೆ ಅನುಷ್ಕಾ ಅವರ ವಿರುದ್ಧ ಟೀಕಾ ಪ್ರವಾಹ ಹರಿದುಬಂದಿತ್ತು. 
 
ಕೊಹ್ಲಿ ಒಂದು ರನ್ ಹೊಡೆದು ಔಟಾಗಿ ಟೀಂ ಇಂಡಿಯಾ ಸೋತ ಬಳಿಕ ಸಾಮಾಜಿಕ ಜಾಲ ತಾಣದಲ್ಲಿ ಅನುಷ್ಕಾ ಬಗ್ಗೆ ಅನೇಕ ಅಭಿಮಾನಿಗಳು ಅಣಕವಾಡಿದ್ದರು. 
''ಆಸ್ಟ್ರೇಲಿಯಾ ಪ್ರವಾಸದಲ್ಲಿ 5 ಶತಕಗಳನ್ನು ಬಾರಿಸಿದ ವ್ಯಕ್ತಿ ಹೆಚ್ಚು ಗೌರವಕ್ಕೆ ಮತ್ತು ಕ್ರಿಕೆಟ್ ಅಭಿಮಾನಿಗಳಿಂದ ಬೆಂಬಲಕ್ಕೆ ಅರ್ಹತೆ ಪಡೆದಿದ್ದಾರೆ'' ಎಂದು ಯುವರಾಜ್  ಟ್ವೀಟ್ ಮಾಡಿದ್ದಾರೆ.

 ಮುಂಬರುವ ದಿನಗಳಲ್ಲಿ ಅವರು ತಮ್ಮ ದೇಶಕ್ಕಾಗಿ ಪುನಃ ಪುನಃ ಪ್ರಕಾಶಿಸುವುದು ಖಂಡಿತ ಎಂದು ಹೇಳಿದರು. ಬಾಲಿವುಡ್ ಸಿಬ್ಬಂದಿ ಕೂಡ ಅನುಷ್ಕಾಗೆ ಬೆಂಬಲಿಸಲು ಮೈಕ್ರೋ ಬ್ಲಾಗಿಂಗ್ ಸೈಟ್‌ ಮೊರೆ ಹೋಗಿದ್ದಾರೆ. 
 
 
 
 
 

ವೆಬ್ದುನಿಯಾವನ್ನು ಓದಿ