ಪಾಕಿಸ್ತಾನದಲ್ಲಿ ಭಯೋತ್ಪಾದನೆ: ಕ್ರಿಕೆಟ್ ಪ್ರವಾಸ ಕೈಬಿಟ್ಟ ಜಿಂಬಾಬ್ವೆ

ಶುಕ್ರವಾರ, 15 ಮೇ 2015 (12:46 IST)
ಜಿಂಬಾಬ್ವೆ ಕ್ರಿಕೆಟ್ ಆಡಳಿತವು ಗುರುವಾರ ಪಾಕಿಸ್ತಾನಕ್ಕೆ ಯೋಜಿಸಿದ್ದ ಕ್ರಿಕೆಟ್  ಪ್ರವಾಸವನ್ನು ಕೈಬಿಟ್ಟಿದೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಹಿಂಸಾಚಾರ ಸಂಭವಿಸಿರುವ ಹಿನ್ನೆಲೆಯಲ್ಲಿ  ಕಳಪೆ ಭದ್ರತೆಯನ್ನು ಉದಾಹರಿಸಿ ಜಿಂಬಾಬ್ವೆ ಈ ಪ್ರವಾಸವನ್ನು ರದ್ದುಮಾಡಿದೆ.

ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ಮಾರಣಾಂತಿಕ ದಾಳಿ ಮಾಡಿದ ಬಳಿಕ ಪಾಕಿಸ್ತಾನ ಪ್ರವಾಸವನ್ನು ಇತರೆ ದೇಶಗಳ ಕ್ರಿಕೆಟ್ ಮಂಡಳಿಗಳು ರದ್ದುಮಾಡಿದ್ದವು.  ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಉಗ್ರರ ದಾಳಿಯಲ್ಲಿ 6 ಪಾಕ್ ಪೊಲೀಸರು ಮತ್ತು ಇಬ್ಬರು ನಾಗರಿಕರು ಸತ್ತ ಬಳಿಕ ಟೆಸ್ಟ್ ಆಡುವ ರಾಷ್ಟ್ರದಿಂದ ಇದೇ ಮೊದಲ ಪ್ರವಾಸವಾಗಿತ್ತು. 
 
 ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಥಳವಾಗಿ ತನ್ನ ಸ್ಥಾನಮಾನ ಉಳಿಸಿಕೊಳ್ಳಲು ಪಾಕಿಸ್ತಾನ ಹತಾಶ ಸ್ಥಿತಿಯಲ್ಲಿದೆ. ಆದರೆ ಈ ವಾರ ಬಂದೂಕುಧಾರಿಗಳು ಪ್ರಯಾಣಿಕರ ಬಸ್ ಮೇಲೆ ದಾಳಿ ಮಾಡಿ 43 ಜನರನ್ನು ಕೊಂದ ಬಳಿಕ ಭದ್ರತಾ ಕಳವಳ ಮತ್ತಷ್ಟು ಹೆಚ್ಚಾಗಿದೆ. 
 
ದೇಶದ ಪರಮೋಚ್ಛ ಕ್ರೀಡಾ ನಿಯಂತ್ರಣ ಪ್ರಾಧಿಕಾರದ ಸಲಹೆಯನ್ನು ಪರಿಗಣಿಸಿ ಪ್ರವಾಸ ಮಾಡದಿರಲು ನಿರ್ಧರಿಸಲಾಗಿದೆ ಎಂದು ಜಿಂಬಾಬ್ವೆ ಕ್ರಿಕೆಟ್ ಹೇಳಿಕೆಯಲ್ಲಿ ತಿಳಿಸಿದೆ. 
ಜಿಂಬಾಬ್ವೆ ಈ ವಾರ ಪಾಕ್ ಪ್ರವಾಸಕ್ಕೆ 16 ಮಂದಿಯ ತಂಡವನ್ನು ಪ್ರಕಟಿಸಿತ್ತು. ಆದರೆ ಖಾಸಗಿ ಸುದ್ದಿಪತ್ರಿಕೆಯೊಂದು ತಂಡವನ್ನು ಅಪಾಯದಲ್ಲಿಡಬಾರದು ಎಂದು ಸಲಹೆ ಮಾಡಿತ್ತು. ಪಾಕಿಸ್ತಾನ ಪ್ರವಾಸಕ್ಕೆ ಸುರಕ್ಷಿತ ಸ್ಥಳವಲ್ಲ ಎಂದೂ ಅದು ಹೇಳಿತ್ತು. 

ವೆಬ್ದುನಿಯಾವನ್ನು ಓದಿ