ಟಿ-20 ಮಹಿಳಾ ವಿಶ್ವಕಪ್: ಮೂರನೇ ಬಾರಿಗೆ ಟ್ರೋಫಿ ಗೆದ್ದ ಆಸ್ಟ್ರೇಲಿಯಾ

ಸೋಮವಾರ, 7 ಏಪ್ರಿಲ್ 2014 (11:00 IST)
ಐಸಿಸಿ ಮಹಿಳಾ ವಿಶ್ವ ಟಿ-20 ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡ ಸತತ ಮೂರನೇ ಬಾರಿಗೆ ಟ್ರೋಫಿ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದೆ. 2010ರ ಆವೃತ್ತಿಯಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಜಯಿಸಿ ಟ್ರೋಫಿ ಗೆದ್ದುಕೊಂಡಿದ್ದ ಆಸೀಸ್ ಮಹಿಳಾ ತಂಡ, 2012ರಲ್ಲಿ ಶ್ರೀಲಂಕಾವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
PTI

2009ರ ಚೊಚ್ಚಲ ವಿಶ್ವ ಮಹಿಳಾ ಟಿ-20 ಟೂರ್ನಿಯಲ್ಲಿ ಇಂಗ್ಲೆಂಡ್ ವನಿತೆಯರು ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್ ಗೆಲುವಿನೊಂದಿಗೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಶೇರ್ ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರವಿವಾರ ನಡೆದ ನಿರ್ಣಾಯಕ ಪಂದ್ಯದ ಸೆಣಸಾಟದಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬರದ 6 ವಿಕೆಟ್ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಮಹಿಳಾ ತಂ, ಪುರುಷರ ತಂಡ ಅನುಭವಿಸಿದ್ದ ವೈಫಲ್ಯವನ್ನು ಮೆಟ್ಟಿನಿಂತು ಸಂಭ್ರಮಿಸಿತು.

ಗೆಲ್ಲಲು 106 ರನ್ ಗುರಿ ಪಡೆದಿದ್ದ ಮೆಗ್ ಲ್ಯಾನ್ನಿಂಗ್ ಸಾರಥ್ಯದ ಆಸೀಸ್ ಮಹಿಳಾ ತಂಡ, ಇನ್ನೂ 29 ಎಸೆತಗಳು ಬಾಕಿ ಇರುವಂತೆಯೇ, 15.1 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಜಯದ ಕಹಳೆ ಮೊಳಗಿಸಿತು.

ಶಿಸ್ತುಬದ್ಧ ದಾಳಿ ನಡೆಸಿ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸಿದ ಸಾರಾ ಕೋಯ್ಟಿ ಪಂದ್ಯಶ್ರೇಷ್ಠರಾದರು. 6 ಪಂದ್ಯಗಳಲ್ಲಿ 98 ರನ್‌ಗೆ 13 ವಿಕೆಟ್ ಪಡೆದ ಇಂಗ್ಲೆಂಡ್‌ನ ಅನ್ಯಾಶ್ರುಸೋಲ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆರಂಭಿಕರಾದ ಎಲಿಸಿ ವಿಲಾನಿ (12), ಜೆಸ್ ಜೊನ್ನಾಸೆನ್ (15) ಅಸ್ಥಿರ ಪ್ರದರ್ಶನ ತೋರಿದರಾದರೂ, ತಂಡದ ನಾಯಕಿಯಾಗಿ ಯಶಸ್ವಿ ಪ್ರದರ್ಶನ ನೀಡಿದ ಲ್ಯಾನ್ನಿಂಗ್ 30 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ 44 ಹಾಗೂ ಎಲಿಸಿ ಪೆರ್ರಿ 32 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 31 ರನ್ ಮಾಡಿ ತಂಡದ ಗೆಲುವಿಗೆ ಕಾರಣರಾದರು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಆಸೀಸ್ ವಿರುದ್ಧ ಚಾರ್ಲೊಟ್ಟಿ ಎಡ್ವರ್ಡ್ಸ್ ನಾಯಕತ್ವದ ಇಂಗ್ಲೆಂಡ್ ಮಹಿಳಾ ತಂಡ, ಬ್ಯಾಟಿಂಗ್ ವೈಫಲ್ಯದಿಂದಾಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು. ತಂಡದ ಪರ ಹೀತರ್ ನೈಟ್ 24 ಎಸೆತದಲ್ಲಿ 29 ರನ್ ಮಾಡಿ ಗರಿಷ್ಠ ಸ್ಕೋರ್ ಮಾಡಿದ ಆಟಗಾರ್ತಿ ಎನಿಸಿಕೊಂಡರು.

ಆಸೀಸ್ ಪರ ಸಾರಾ ಕೋಯ್ಟಿ 16ಕ್ಕೆ 3 ವಿಕೆಟ್ ಪಡೆದು ಯಶಸ್ವಿ ಎನಿಸಿದರೆ, ರಿನೆ ಫಾರೆಲ್ ಮತ್ತು ಎಲಿಸಿ ಪೆರ್ರಿ ತಲಾ 2 ವಿಕೆಟ್ ಗಳಿಸಿದರು

ವೆಬ್ದುನಿಯಾವನ್ನು ಓದಿ