ಸ್ಪಾಟ್ ಫಿಕ್ಸಿಂಗ್ ಹಗರಣ: ಶ್ರೀಶಾಂತ್ ಜಾಮೀನಿನ ಮೂಲಕ ಹೊರಗೆ

ಬುಧವಾರ, 17 ಜುಲೈ 2013 (12:49 IST)
PR
PR
ಐಪಿಎಲ್ ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಆಟಗಾರರು ಜೈಲು ಸೇರಿದರು ನಿನ್ನೆಗೆ ಈ ಹಗರಣ ಬಯಲಿಗೆ ಬಂದು ಎರಡು ತಿಂಗಳು ಕಳೆದಿವೆ . ಹಗರಣದಲ್ಲಿ ಸಿಕ್ಕಿಬಿದ್ದು ತಿಹಾರ್ ಜೈಲು ಸೇರಿದ್ದ ರಾಜಸ್ಥಾನ ರಾಯಲ್ಸ್‌ತಂಡದ ಆಟಗಾರರ ಪೈಕಿ ಶ್ರೀಶಾಂತ್ ಮತ್ತು ಅಂಕಿತ್ ಚವಾಣ್ ಜಾಮೀನಿನ ಮೂಲಕ ಹೊರಬಂದಿದ್ದಾರೆ. ಆದರೆ ಅಜಿತ್ ಚಾಂಡಿಲಾ ಇನ್ನೂ ಜೈಲಿನಿಂದ ಹೊರಬಂದಿಲ್ಲ.

ಕಳಂಕಿತ ಮೂವರು ಆಟಗಾರರನ್ನು ದಿಲ್ಲಿ ಪೊಲೀಸರು ಸೆರೆ ಹಿಡಿದ ಬೆನ್ನಿಗೆ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಲ್ಲಿ ಶಾಮೀಲಾಗಿದ್ದ ಬುಕ್ಕಿಗಳು, ಬಾಲಿವುಡ್ ನಟರು ಮತ್ತು ಟೀಮ್‌ನ ಮಾಲಕರ ಬೆಟ್ಟಿಂಗ್ ಗುಟ್ಟು ರಟ್ಟಾಯಿತು. ಬಾಲಿವುಡ್ ನಟ ವಿಂದೂ ದಾರಾಸಿಂಗ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಓ ಗುರುನಾಥ್ ಮಯ್ಯಪ್ಪನ್ ತನಿಖಾ ತಂಡದ ಬಲೆಗೆ ಬಿದ್ದು ಜೈಲು ಸೇರಿ ಹೊರಬಂದರು. ಮಯ್ಯಪ್ಪನ್ ಹಗರಣದಲ್ಲಿ ಭಾಗೀಯಾದ ಹಿನ್ನೆಲೆಯಲ್ಲಿ ಅವರ ಮಾವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅಧ್ಯಕ್ಷ ಸ್ಥಾನದಿಂದ ತಾತ್ಕಾಲಿಕವಾಗಿ ದೂರ ನಿಲ್ಲಬೇಕಾಯಿತು.

ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ತನ್ನ ತಂಡದ ಪಂದ್ಯಗಳ ಮೇಲೆ ಬೆಟ್ ಕಟ್ಟಿ, ಕೋಟ್ಯಂತರ ರೂ.ಗಳನ್ನು ಕಳೆದುಕೊಂಡಿರುವುದನ್ನು ಒಪ್ಪಿಕೊಂಡರು.ಬ್ರಿಟಿಷ್ ಪ್ರಜೆಯಾಗಿರುವ ಕುಂದ್ರಾ ಪಾಸ್‌ಪೋರ್ಟ್‌ನ್ನು ಪೊಲೀಸರು ತನಿಖಾ ವೇಳೆ ವಶಪಡಿಸಿಕೊಂಡರು. ಆದರೆ ಕುಂದ್ರಾ ಜೈಲು ಸೇರಲಿಲ್ಲ.

ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್‌ನ್ನು ಭೂಗತ ಪಾತಕಿಗಳು ನಡೆಸುತ್ತಿರುವ ವಿಚಾರವನ್ನು ಪೊಲೀಸರು ತನಿಖೆಯ ವೇಳೆ ಹೊರಗೆಡವಿ, ಪ್ರಕರಣದಲ್ಲಿ ಸಿಲುಕಿಕೊಂಡ ಆರೋಪಿಗಳು ಸಂಘಟಿತ ಅಪರಾಧದಲ್ಲಿ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮೊಕಾ ಕಾಯ್ದೆಯಡಿ ಪೊಲೀಸರು ಶಿಕ್ಷೆಗೊಳಪಡಿಸುವ ಯತ್ನ ನಡೆಸಿದರು. ಆದರೆ ದಿಲ್ಲಿ ನ್ಯಾಯಾಲಯ ಆರೋಪಿಗಳ ವಿರುದ್ಧ ಮೊಕಾ ಕಾಯ್ದೆ ಹೇರಲು ಸೂಕ್ತ ಸಾಕ್ಷಾಧಾರಗಳು ಇಲ್ಲ ಎಂಬ ಕಾರಣವನ್ನು ಮುಂದಿಟ್ಟು, ಆರೋಪಿಗಳಿಗೆ ಜಾಮೀನಿಗೆ ಅವಕಾಶ ನೀಡಿತು.

ಜೂನ್ 10ರಂದು ದಿಲ್ಲಿ ನ್ಯಾಯಾಲಯವು ಆರೋಪಿಗಳ ವಿರುದ್ಧ ಮೊಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಾಕ್ಷಾಧರಗಳ ಕೊರತೆ ಇರುವುದನ್ನು ಬೊಟ್ಟು ಮಾಡಿ ಬಂಧಿತ 26 ಮಂದಿ ಆರೋಪಿಗಳಲ್ಲಿ 19 ಮಂದಿಗೆ ಜಾಮೀನು ಮಂಜೂರು ಮಾಡಿತು. ಇದರಿಂದಾಗಿ ಸ್ಪಾಟ್ ಫಿಕ್ಸಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದ ತನಿಖೆಯಲ್ಲಿ ಹೆಚ್ಚಿನ ಉತ್ಸಾಹ ತೋರಿ, ಕಳಂಕಿತರನ್ನು ಜೈಲಿಗೆ ಅಟ್ಟಿ ಅವರ ವಿರುದ್ಧ ಕಠಿಣ ಸಜೆ ವಿಧಿಸಲು ಪೊಲೀಸರು ನಡೆಸಿದ್ದ ಪ್ರಯತ್ನಕ್ಕೆ ಹಿನ್ನೆಡೆ ಕಂಡು ಬಂತು. ಆದರೆ ಪೊಲೀಸರ ಪ್ರಕಾರ ಈ ಹಗರಣದ ಪ್ರಮುಖ ಆರೋಪಿಗಳು ಇನ್ನೂ ಜೈಲಿನಲ್ಲಿ ಇದ್ದಾರೆ.

ವೆಬ್ದುನಿಯಾವನ್ನು ಓದಿ