ಅಂಕಪಟ್ಟಿಯಲ್ಲಿ ಅಗ್ರಸ್ಥಾನಪಡೆಯಲು ಮುಂಬೈ ಹರಸಾಹಸ

ಮಂಗಳವಾರ, 30 ಏಪ್ರಿಲ್ 2013 (14:29 IST)
PTI
ಅಂಕಪಟ್ಟಿಯಲ್ಲಿ ಉನ್ನತ ಸ್ಥಾನಕ್ಕೇರಲು ಹವಣಿಸುತ್ತಿರುವ ಮುಂಬೈ ತಂಡವು ಸೋಮವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 4 ರನ್‌ಗಳಿಂದ ರೋಚಕ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಲು ನಿರ್ಧರಿಸಿದ ಮುಂಬೈ ತಂಡ ನಿಧಾನಗತಿಯ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡ್ವೇನ್ ಸ್ಮಿತ್ ಹಾಗೂ ಸಚಿನ್ ತೆಂಡೂಲ್ಕರ್ ತಂಡಕ್ಕೆ ಕೇವಲ 11 ರನ್ ಜತೆಯಾಟ ನೀಡಿದರು. ಈ ವೇಳೆ 9 ರನ್‌ಗಳಿಸಿದ್ದ ಸಚಿನ್, ಪ್ರವೀಣ್ ಕುಮಾರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ನಂತರ 19 ಎಸೆತಗಳಲ್ಲಿ 25 ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ್ದ ದಿನೇಶ್ ಕಾರ್ತಿಕ್, ಗೋನಿ ಎಸೆತದಲ್ಲಿ ಬೌಲ್ಡ್ ಆದರು. ನಂತರ 32 ಎಸೆತದಲ್ಲಿ 33 ರನ್‌ಗಳಿಸಿ ಉತ್ತಮ ಆರಂಭ ಪಡೆದಿದ್ದ ಡ್ವೇನ್ ಸ್ಮಿತ್, ಚಾವ್ಲಾ ಎಸೆತದಲ್ಲಿ ಮಿಲ್ಲರ್‌ಗೆ ಕ್ಯಾಚ್ ನೀಡಿದರು.

ನಂತರ ಜತೆಯಾದ ನಾಯಕ ರೋಹಿತ್ ಶರ್ಮಾ ಹಾಗೂ ಪೊಲಾರ್ಡ್ ತಂಡಕ್ಕೆ 88 ರನ್‌ಗಳ ಉತ್ತಮ ಜತೆಯಾಟ ನೀಡಿದರು. ಈ ವೇಳೆ ರೋಹಿತ್ ಶರ್ಮಾ 39 ಎಸೆತಗಳಲ್ಲಿ 79 ರನ್‌ಗಳಿಸಿ ಅಜೇಯರಾಗಿ ಉಳಿದರು. ಶರ್ಮಾಗೆ ಉತ್ತಮ ಸಾಥ್ ನೀಡಿದ ಪೊಲಾರ್ಡ್ 21 ಎಸೆತಗಳಲ್ಲಿ 20 ರನ್‌ಗಳಿಸಿದರು. ಅಂತಿಮ ಓವರ್‌ಗಳಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ಈ ಜೋಡಿ ತಂಡದ ಮೊತ್ತ 174 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ನೆರವಾದರು.

ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ತಂಡ 20 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 170 ರನ್‌ಗಳಿಸಿ 4 ರನ್‌ಗಳ ವಿರೋಚಿತ ಸೋಲನುಭವಿಸಿತು.

ತಂಡದ ಆರಂಭಿಕರಾದ ಮಂದೀಪ್ (9), ಮಾರ್ಷ್ (10), ವೊಹ್ರಾ (1) ರನ್‌ಗಳಿಸಿ ಔಟಾಗುವ ಮೂಲಕ ತಂಡದ ಆರಂಭಿಕ ಕುಸಿತಕ್ಕೆ ಕಾರಣರಾದರು. ನಂತರ ಬಂದ ಹಸ್ಸಿ (34), ಮಿಲ್ಲರ್ (56) ರನ್‌ಗಳಿಸಿ ತಂಡವನ್ನು ಕುಸಿತದಿಂದ ಮೇಲೆತ್ತುವ ಪ್ರಯತ್ನ ನಡೆಸಿದರು. ಇವರ ನಂತರ ಬಂದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಎರಡಂಕ್ಕಿ ದಾಟಲಿಲ್ಲ. ಅಂತಿಮವಾಗಿ ಹೋರಾಟ ನಡೆಸಿದ ಪ್ರವೀಣ್ ಕುಮಾರ್ 15 ಎಸೆತದಲ್ಲಿ 24 ರನ್ ಗಳಿಸಿದರಾದರು ತಂಡವನ್ನು ಗೆಲವಿನ ದಡ ಸೇರಿಸುವಲ್ಲಿ ವಿಫಲರಾದರು.

ವೆಬ್ದುನಿಯಾವನ್ನು ಓದಿ