ಅಂತಿಮ ಟೆಸ್ಟ್ ಗೆದ್ದರೆ ಭಾರತ ಮೊತ್ತ ಮೊದಲ ಬಾರಿಗೆ ನಂ.1

ಸೋಮವಾರ, 30 ನವೆಂಬರ್ 2009 (17:28 IST)
ಆತಿಥೇಯ ಭಾರತ ಬುಧವಾರದಿಂದ ಆರಂಭವಾಗಲಿರುವ ಪ್ರವಾಸಿ ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವನ್ನು ಜಯಿಸುವಲ್ಲಿ ಸಫಲವಾದಲ್ಲಿ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಮೊತ್ತ ಮೊದಲ ಬಾರಿಗೆ ನಂಬರ್ ವನ್ ಪಟ್ಟವನ್ನು ಆಲಂಕರಿಸಲಿದೆ.

ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡ ಧೋನಿ ಪಡೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ರ ಅಂತರದ ಮುನ್ನಡೆಯಲ್ಲಿದೆ.

ಪ್ರಸಕ್ತ ಭಾರತ ಐಸಿಸಿ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಅಗ್ರ ಎರಡು ಸ್ಥಾನದಲ್ಲಿದೆ.

ಅದೇ ವೇಳೆ ರ‌್ಯಾಂಕಿಂಗ್ ಸ್ಥಾನವನ್ನು ಮರೆತುಬಿಟ್ಟು ಸಹಜ ಆಟ ಆಡುವಂತೆ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ಸಹ ಆಟಗಾರರರಿಗ ಸಲಹೆ ನೀಡಿದ್ದಾರೆ. ಅಗ್ರಸ್ಥಾನಕ್ಕೇರುವುದು ಪ್ರಮುಖ ವಿಷಯವಲ್ಲ; ಬದಲಾಗಿ ಪ್ರದರ್ಶನ ಮಟ್ಟವನ್ನು ಕಾಯ್ದುಕೊಳ್ಳಬೇಕಾಗಿರುವುದು ಅತ್ಯವಶ್ಯಕ ಎಂದು ಅವರು ಹೇಳಿದರು.

ಅದೇ ವೇಳೆ ತಂಡ ಆರಂಭಿಕ ಆಟಗಾರ ಗೌತಮ್ ಗಂಭೀರ್ ಸೇವೆಯಿಂದ ವಂಚಿತವಾಗಲಿದೆ. ಗಂಭೀರ್ ಬದಲು ಮುರಳಿ ವಿಜಯ್, ಸೆಹ್ವಾಗ್ ಜೊತೆ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ.

ಪ್ರಸಕ್ತ ಸರಣಿಯಲ್ಲಿ ಇದುವರೆಗೆ ಬ್ಯಾಟ್ಸ್‌ಮನ್‌ಗಳದ್ದೇ ಕಾರುಬಾರು ನಡೆದಿದ್ದು, ಒಟ್ಟು ಹತ್ತು ಶತಕ ದಾಖಲಾಗಿವೆ. ಆದರೆ ಕಾನ್ಪುರದಲ್ಲಿ ಶ್ರೀಶಾಂತ್ ಐದು ವಿಕೆಟ್ ಪಡೆಯುವ ಮೂಲಕ ಸರಣಿಯಲ್ಲಿ ವೇಗಿಗಳ ಪಾಲುದಾರಿಕೆಯೂ ಕೂಡಾ ಇದೆ ಎಂಬುದನ್ನು ನೆನಪಿಸಿಕೊಂಡಿದ್ದರು.

ಮತ್ತೊಂದೆಡೆ ಭಾರತ ನೆಲದಲ್ಲಿ ಮೊದಲ ಟೆಸ್ಟ್ ಐತಿಹಾಸಿಕ ಜಯ ಎದುರು ನೋಡುತ್ತಿರುವ ಲಂಕಾಗೆ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಚಿಂತೆ ಕಾಡತೊಡಗಿದೆ. ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿರುವ ಮುರಳಿ ಎರಡು ಟೆಸ್ಟ್‌ಗಳಲ್ಲಾಗಿ ಒಟ್ಟು 396ರನ್ ತೆತ್ತು ಕೇವಲ ಐದು ವಿಕೆಟ್‌ಗಳನಷ್ಟೇ ಪಡೆದಿದ್ದಾರೆ.

ಆದರೆ ಕಪ್ತಾನ ಸಂಗಕ್ಕರ, ಸ್ಪಿನ್ನ್ ದಿಗ್ಗಜನ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಅವರೀಗಲೂ ತಂಡದ ಪ್ರಮುಖ ಅಸ್ತ್ರ ಎಂದು ಹೇಳುವ ಮೂಲಕ ಮುರಳೀಯವರನ್ನು ಹುರಿದುಂಬಿಸಿದ್ದಾರೆ. ಮುಂಬೈ ಟೆಸ್ಟ್‌ನಲ್ಲಿ ತಂಡದಿಂದ ಶೇಕಡಾ ನೂರರಷ್ಟು ಪ್ರದರ್ಶನ ಮಟ್ಟ ಕಂಡುಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ