ಅಭಿಮಾನಿಗಳಿಂದ ದೇವರಾದ ಧೋನಿಗೆ ದೇವಸ್ಥಾನ !

ಶನಿವಾರ, 20 ಡಿಸೆಂಬರ್ 2008 (20:41 IST)
ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ ದೇವರಲ್ಲ; ಆದರೂ ಅವರ ಊರಿನ ಅಭಿಮಾನಿಗಳು ಧೋನಿಯ ಹೆಸರಿನಲ್ಲಿ ದೇವಸ್ಥಾನ ಕಟ್ಟುತ್ತಾರಂತೆ.. ಅಲ್ಲಿ ಧೋನಿಯ ಮ‌ೂರ್ತಿಯನ್ನೂ ಇಡಲಾಗುತ್ತದೆಯಂತೆ!

'ನಾವು ಧೋನಿ ಅಭಿಮಾನಿಗಳು' ಎಂಬ ಹೆಸರಿನ ಕ್ಲಬ್ ಸದಸ್ಯರು ಈ ಸಾಹಸಕ್ಕೆ ಕೈ ಹಾಕಿದ್ದು, ಈಗಾಗಲೇ ಧನ ಸಂಗ್ರಹಣೆಯಲ್ಲಿ ತೊಡಗಿದ್ದಾರಂತೆ. ತಮ್ಮ ಆರಾಧ್ಯ ಮ‌ೂರ್ತಿಗೆ ದೇವಸ್ಥಾನ ಕಟ್ಟಿ, ಅದರಲ್ಲಿ ಐದು ಅಡಿ ಎತ್ತರದ ಧೋನಿಯ ಮ‌ೂರ್ತಿಯನ್ನು ಪ್ರತಿಷ್ಠಾಪಿಸುವ ಉದ್ದೇಶ ಅವರದ್ದು.

"ಅಮಿತಾಬ್ ಬಚ್ಚನ್ ಮತ್ತು ಶಾರೂಖ್ ಖಾನ್‌ರಿಗೆ ಲಂಡನ್‌ನಲ್ಲಿ ಮೇಣದ ಪ್ರತಿಮೆಯಿದೆ. ನಮ್ಮೂರಿನ ಹುಡುಗನಿಗೆ ನಾವು ದೇವಸ್ಥಾನ ಯಾಕೆ ಕಟ್ಟಬಾರದು ಎಂದು ಯೋಚಿಸಿದೆವು" ಎಂದು ಅಭಿಮಾನಿಗಳ ಸಂಘದ ಅಧ್ಯಕ್ಷ ಜಿತೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಆದರೆ ಬಲಿಪೀಠದಲ್ಲಿ ತನ್ನ ಮ‌ೂರ್ತಿಯನ್ನು ಪ್ರತಿಷ್ಠಾಪಿಸಲು ಧೋನಿ ಒಪ್ಪಿಗೆ ಸೂಚಿಸುವರೇ ಎಂಬುದು ಪ್ರಶ್ನೆ. ಆದರೆ ಇದಕ್ಕೆ ಉತ್ತರಿಸುವ ಅವರ ಅಭಿಮಾನಿಗಳು, "ನಾವು ಅವರ ಮನವೊಲಿಸಲು ಯತ್ನಿಸುತ್ತೇವೆ. ಆಮೇಲೆ ಏನಾಗುತ್ತದೋ ನೋಡೋಣ" ಎನ್ನುತ್ತಾರೆ.

ರಾಂಚಿಯ ಹೊರಭಾಗದಲ್ಲಿ 1650 ಚದರ ಅಡಿಯಷ್ಟು ವಿಸ್ತಾರದಲ್ಲಿ ನಿರ್ಮಾಣವಾಗುತ್ತಿರುವ ಈ ದೇವಸ್ಥಾನದ ಕಾಮಗಾರಿ ಮುಂದಿನ ವರ್ಷ ಪೂರ್ಣವಾಗುವ ನಿರೀಕ್ಷೆಯಿದೆ.

ಜತೆಗೆ ಧೋನಿಯವರ ಸುಮಾರು 200 ಛಾಯಾಚಿತ್ರಗಳನ್ನೂ ಇವರು ಸಂಗ್ರಹಿಸಿದ್ದಾರೆ. ಬಾಲ್ಯದಿಂದ ಇಲ್ಲಿಯವರೆಗಿನ ಅವರ ವಿವಿಧ ಹಂತಗಳನ್ನು ಬಿಂಬಿಸುವ ಫೋಟೋಗಳನ್ನು ಸಂಗ್ರಹಿಸಿದ್ದಾರಂತೆ ಅವರ ಅಭಿಮಾನಿಗಳು. ನಮಗೆ ಸಾಕಷ್ಟು ಬೆಂಬಲಿಗರಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದಾರೆ.

"ವಿಶ್ವದ ನಕಾಶೆಯಲ್ಲಿ ರಾಂಚಿ ಮತ್ತು ಜಾರ್ಖಂಡ್‌ ಹೆಸರನ್ನು ಬೆಳಗಿಸಿದವರು ಧೋನಿ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ನಾವು ದೇವಸ್ಥಾನ ಕಟ್ಟುತ್ತಿದ್ದೇವೆ" ಎಂದು ಸಿಂಗ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ