ಅಭಿಮಾನಿಗಳಿಂದ ದೇವಸ್ಥಾನ: ಧೋನಿ ಕುಟುಂಬ ಅಸಮಾಧಾನ

ಶನಿವಾರ, 3 ಜನವರಿ 2009 (19:13 IST)
ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿಯವರಿಗೆ ಅಭಿಮಾನಿಗಳು ಕಟ್ಟಬೇಕೆಂದಿರುವ ದೇವಸ್ಥಾನದ ಬಗ್ಗೆ ಅವರ ಕುಟುಂಬದ ಸದಸ್ಯರು ಅಸಮಾಧಾನ ಹೊಂದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

"ನಾನು ಬುಧವಾರ ಧೋನಿ ತಂದೆ ಜತೆ ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ದೇವಸ್ಥಾನ ಕಟ್ಟುವ ಬಗ್ಗೆ ಅವರ ಕುಟುಂಬ ಸಮಾಧಾನ ಹೊಂದಿಲ್ಲ. ಅವರ ಪ್ರಕಾರ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಗಳನ್ನು ಸರಿದೂಗಿಸಿಕೊಂಡು ಹೋಗಬೇಕು. ತಂಡ ಸೋಲಿನ ದವಡೆಯಲ್ಲಿದ್ದಾಗ ಆಟಗಾರರ ಪ್ರತಿಕೃತಿ ದಹನದಂತಹ ನಿರ್ಧಾರಗಳನ್ನು ಕೈ ಬಿಡಬೇಕು" ಎಂದು ಧೋನಿಯವರ ಮಾಜಿ ತರಬೇತುದಾರ ಚಂಚಲ್ ಭಟ್ಟಾಚಾರ್ಯ ತಿಳಿಸಿದ್ದಾರೆ.

ಕಳೆದ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯವೊಂದರಲ್ಲಿ ಭಾರತ ಸೋಲೊಪ್ಪಿಕೊಂಡಿದ್ದ ಸಂದರ್ಭದಲ್ಲಿ ಧೋನಿಯವರ ಪ್ರತಿಕೃತಿ ದಹನ ಹಾಗೂ ಮನೆಗೂ ದಾಳಿ ಮಾಡಲಾಗಿತ್ತು. ಇದನ್ನು ಧೋನಿ ಕುಟುಂಬದ ಸದಸ್ಯರು ಈಗ ನೆನಪಿಸಿಕೊಳ್ಳುತ್ತಿದ್ದಾರೆ.

ಧೋನಿಯವರ ಸಹೋದರಿ 'ಧೋನಿ ಅಭಿಮಾನಿಗಳ ಸಂಘ'ದ ಅಧ್ಯಕ್ಷರನ್ನು ಕರೆಸಿ, ದೇವಾಲಯ ಕಟ್ಟುವ ಪ್ರಸ್ತಾಪವನ್ನು ಕೈ ಬಿಡುವಂತೆ ಒತ್ತಾಯಿಸಿದ್ದಾರೆ. "ಬದುಕಿರುವವರನ್ನು ದೇವರಂತೆ ತೋರಿಸುವುದು ಅಥವಾ ದೇವಸ್ಥಾನದಲ್ಲಿ ಅವರ ಮ‌ೂರ್ತಿಗಳನ್ನಿಡುವುದು ಸರಿಯಲ್ಲ" ಎಂದು ಧೋನಿಯವರ ಸಹೋದರಿ ಹೇಳಿದ್ದಾರೆಂದು ಅಭಿಮಾನಿಗಳ ಸಂಘದ ಅಧ್ಯಕ್ಷ ಜಿತೇಂದ್ರ ತಿಳಿಸಿದರು.

"ಧೋನಿಯವರ ಕುಟುಂಬದ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಆದರೆ ನಮ್ಮ ಕ್ಲಬ್‌ನ ಸದಸ್ಯರ ಜತೆ ಚರ್ಚಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಅವರು ಹೇಳಿದ್ದಾರೆ.

"ಕಟ್ಟಡ ರಚನೆಯನ್ನು ದೇವಸ್ಥಾನದಂತೆ ಮಾಡದೆ ಬೇರೆ ರೀತಿಯಲ್ಲಿ ಮಾಡಬಹುದು. ಅಲ್ಲಿ ಅಪರೂಪದ ಧೋನಿಯ ಫೋಟೋಗಳ ಗ್ಯಾಲರಿ ಜತೆ ಧೋನಿಯವರ ಮ‌ೂರ್ತಿಯನ್ನು ಇಡುವ ಬಗ್ಗೆ ಯೋಚನೆಯಿದೆ. ಎಲ್ಲವೂ ನಮ್ಮ ಸಂಘದ ಸಭೆಯ ನಂತರ ನಿರ್ಧಾರವಾಗಲಿದೆ" ಎಂದು ಜಿತೇಂದ್ರ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ