ಅಶ್ವಿನ್ 'ವಿರಾಟ್' ಆಟ; ಲಂಕಾ ದಹನ ಮಾಡಿದ ಭಾರತ

ಬುಧವಾರ, 8 ಫೆಬ್ರವರಿ 2012 (18:07 IST)
WD


ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಆಕರ್ಷಕ ಇನ್ನಿಂಗ್ಸ್ ನೆರವಿನಿಂದ ಇಲ್ಲಿ ಶ್ರೀಲಂಕಾ ವಿರುದ್ಧ ನಡೆದ ತ್ರಿಕೋನ ಏಕದಿನ ಸರಣಿಯ ಪಂದ್ಯವನ್ನು ಭಾರತ ನಾಲ್ಕು ವಿಕೆಟುಗಳ ಅಂತರದಿಂದ ಗೆದ್ದುಕೊಂಡಿದ್ದು, ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ.

ಇದರೊಂದಿಗೆ ಗೆಲುವಿನ ಬರ ಎದುರಿಸುತ್ತಿದ್ದ ಭಾರತ ತಂಡವು ಸಾಕಷ್ಟು ನಿರಾಳತೆ ಅನುಭವಿಸುವಂತಾಗಿದೆ. ಅಂತಿಮ ಹಂತದಲ್ಲಿ ಭಾರತ ಆಂತಕದ ಪರಿಸ್ಥಿತಿ ಎದುರಿಸಿತ್ತಾದರೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರವಿಚಂದ್ರನ್ ಅಶ್ವಿನ್ (30*) ಹಾಗೂ ರವೀಂದ್ರ ಜಡೇಜಾ (24*) ಅವರ ಸಮಯೋಚಿತ ಆಟದಿಂದಾಗಿ ಗೆಲುವು ದಾಖಲಿಸುವಂತಾಗಿದೆ.

ಒಂದು ಹಂತದಲ್ಲಿ ಭಾರತ 36 ಓವರುಗಳಲ್ಲಿ 181ಕ್ಕೆ ಆರು ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟದಲ್ಲಿತ್ತು. ಆದರೆ ಜಡೇಜಾ ಹಾಗೂ ಅಶ್ವಿನ್ ಏಳನೇ ವಿಕೆಟ್‌ಗೆ ಮುರಿಯದ 53 ರನ್ ಪೇರಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಇದಕ್ಕೂ ಮೊದಲು ಆಕರ್ಷಕ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಡ್ಯಾಶಿಂಗ್ ಓಪನರ್ (10) ವಿಕೆಟ್ ಆರಂಭದಲ್ಲೇ ಕಳೆದುಕೊಂಡರೂ ಕೊಹ್ಲಿ ಜತೆ ಸೇರಿದ್ದ ಸಚಿನ್ ತೆಂಡೂಲ್ಕರ್ ಎರಡನೇ ವಿಕೆಟ್‌ಗೆ 75 ರನ್ನುಗಳ ಜತೆಯಾಟ ನೀಡಿದರು. 63 ಎಸೆತಗಳನ್ನು ಎದುರಿಸಿದ್ದ ಸಚಿನ್ ಐದು ಬೌಂಡರಿಗಳ ನೆರವಿನಿಂದ 48 ರನ್ ಗಳಿಸಿದ್ದರು.

ಆನಂತರ ಕ್ರೀಸಿಗಿಳಿದ ರೋಹಿತ್ ಶರ್ಮಾ (10) ಹಾಗೂ ಸುರೇಶ್ ರೈನಾ (24) ಉತ್ತಮವಾಗಿ ಮೂಡಿಬಂದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಾಯಕ ಮಹೇಂದ್ರ ಸಿಂಗ್ ಧೋನಿ (4) ಸಹ ಬೇಗನೇ ನಿರ್ಗಮಿಸುವಂತಾಗಿತ್ತು.

ಮತ್ತೊಂದೆಡೆ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ 94 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 77 ರನ್ ಗಳಿಸಿದರು. ಆದರೆ ಸ್ನಾಯು ಸೆಳೆತದಿಂದಾಗಿ ರನೌಟ್‌ಗೆ ಬಲಿಯಾದ ಕೊಹ್ಲಿ ನಿರಾಸೆ ಅನುಭವಿಸಿದರು.

ಹಾಗಿದ್ದರೂ ತಂಡವನ್ನು ವಿಜಯದತ್ತ ಕೊಂಡೊಯ್ಯುವಲ್ಲಿ ಜಡೇಜಾ-ಅಶ್ವಿನ್ ಜೋಡಿ ಯಶಸ್ವಿಯಾಯಿತು. ಅಂತಿಮವಾಗಿ ಲಂಕಾ ಸವಾಲನ್ನು ಭಾರತ 46.4 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಮೆಟ್ಟಿ ನಿಂತಿತ್ತು.

WD


ಈ ಮುನ್ನ ಪಂದ್ಯದ ಆರಂಭದಲ್ಲೇ ಎರಡು ಪ್ರಮುಖ ವಿಕೆಟುಗಳನ್ನು ಕಬಳಿಸಿದ ಅನುಭವಿ ವೇಗಿ ಜಹೀರ್ ಖಾನ್ (44ಕ್ಕೆ 2 ವಿಕೆಟ್) ಅವರ ಪ್ರಭಾವಿ ದಾಳಿ ನೆರವಿನಿಂದ ಶ್ರೀಲಂಕಾ ತಂಡವನ್ನು 233 ರನ್ನುಗಳಿಗೆ ಕಟ್ಟಿ ಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಜಹೀರ್ ಅವರಿಗೆ ಉತ್ತಮ ಸಾಥ್ ನೀಡಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೂರು ವಿಕೆಟುಗಳನ್ನು ಕಬಳಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ತಿಲಕರತ್ನೆ ದಿಲ್‌ಶಾನ್ ರಾಜೀನಾಮೆ ನೀಡಿದ್ದರಿಂದ ಶ್ರೀಲಂಕಾ ತಂಡದ ನಾಯಕತ್ವ ಜವಾಬ್ದಾರಿಯನ್ನು ಅನುಭವಿ ಮಹೇಲಾ ಜಯವರ್ಧನೆ ವಹಿಸಿಕೊಂಡಿದ್ದಾರೆ. ಇದರಂತೆ ಟಾಸ್ ಗೆದ್ದುಕೊಂಡ ಲಂಕಾ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ದಿಲ್‌ಶಾನ್ 48 ರನ್ನುಗಳ ಉಪಯುಕ್ತ ನೆರವು ನೀಡಿದರು.

ಆದರೆ ಆರಂಭದಲ್ಲೇ ಉಪುಲ್ ತರಂಗ (4) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕರ (48) ವಿಕೆಟ್ ಕಬಳಿಸಿದ ಜಹೀರ್ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟಿದ್ದರು.

ಈ ನಡುವೆ ದಿನೇಶ್ ಚಾಂಧಿಮಾಲ್ ಆಕರ್ಷಕ ಅರ್ಧಶತಕ (64) ಬಾರಿಸಿದರು. ಆದರೆ ಉತ್ತಮವಾಗಿ ಮೂಡಿಬರುತ್ತಿದ್ದ ಜಯವರ್ಧನೆ 23 ರನ್ ಗಳಿಸಿ ವಿಕೆಟ್ ಓಪ್ಪಿಸಿದರು.

ಉಳಿದಂತೆ ಒಂದು ಬದಿಯಿಂದ ವಿಕೆಟ್ ಪತನಗೊಳ್ಳುತ್ತಿದ್ದರೂ ಅಜೇಯ 33 ರನ್ ಬಾರಿಸಿದ ಆಂಗಲೋ ಮ್ಯೂಥ್ಯೂಸ್ ತಂಡದ ಮೊತ್ತವನ್ನು 230ರ ಗಡಿ ದಾಟಿಸಿದರು. ಅಂತಿಮವಾಗಿ ತಂಡವು ನಿಗದಿತ 50 ಓವರುಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 233 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.

ವೆಬ್ದುನಿಯಾವನ್ನು ಓದಿ