ಈ ಗೆಲುವು ವಿಶ್ವಕಪ್‌ ಸಮಾನ: ಕಾಲಿಸ್

ಶನಿವಾರ, 3 ಜನವರಿ 2009 (19:54 IST)
ಆಸ್ಟ್ರೇಲಿಯಾ ವಿರುದ್ಧದ ಅದರದೇ ನೆಲದಲ್ಲಿ ಸರಣಿ ಜಯಿಸಿರುವುದು ವಿಶ್ವಕಪ್ ಜಯಕ್ಕೆ ಸಮಾನ ಎಂದು ದಕ್ಷಿಣ ಆಫ್ರಿಕಾ ಆಲ್‌ರೌಂಡರ್ ಜಾಕ್ವಾಸ್ ಕಾಲಿಸ್ ಗೆಲುವನ್ನು ವಿಶ್ಲೇಷಿಸಿದ್ದಾರೆ.

"ಇದು ವಿಶ್ವಕಪ್ ಎತ್ತಿ ಹಿಡಿದಂತಹ ಸಾಧನೆಗೆ ಸಮಾನವಾಗಿದೆ. ಈ ಸಾಧನೆ ಮಾಡಲು ಇದಕ್ಕಿಂತ ಉತ್ತಮ ಜಾಗ ಬೇಕೆನಿಸುತ್ತಿದೆಯೇ? ನಾನು ವೈಯಕ್ತಿಕವಾಗಿ ಕೆಲವು ಅದ್ಭುತ ಕ್ಷಣಗಳನ್ನು ಇಲ್ಲಿ ಕಳೆದಿದ್ದೇನೆ. ಗೆಲ್ಲಲು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ನಾವು ಸಂಭ್ರಮಿಸಿದ್ದೇವೆ" ಎಂದು ಕ್ಯಾಲಿಸ್ ಹೇಳಿದರು.

ಮಾತು ಮುಂದುವರಿಸಿದ ಕಾಲಿಸ್, "ಆಸ್ಟ್ರೇಲಿಯಾ ಪ್ರವಾಸಕ್ಕೆ ಸುಲಭದ ಸ್ಥಳವಲ್ಲ ಎಂಬುದನ್ನು ಯುವ ಪೀಳಿಗೆಗೆ ಹೇಳಬಯಸುತ್ತೇನೆ" ಎಂದರು.

ಕ್ಯಾಲಿಸ್‌ರಂತೆ ದಕ್ಷಿಣ ಆಫ್ರಿಕಾದ ಇತರ ಆಟಗಾರರೂ ಸರಣಿ ಗೆಲುವಿನ ಬಗ್ಗೆ ವರ್ಣಿಸಲು ಪದಗಳು ಸಿಗದೆ ಪರದಾಡುತ್ತಿದ್ದಾರೆ. ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಪಂದ್ಯ ಪುರುಷ ಪ್ರಶಸ್ತಿ ಪಡೆದ ವೇಗಿ ಡೇಲ್ ಸ್ಟೈನ್, "ಈಗ ನನಗೇನನ್ನಿಸುತ್ತಿದೆ ಎಂಬುದನ್ನು ಹೇಳಲು ನನಗೆ ಪದಗಳೇ ಸಿಗುತ್ತಿಲ್ಲ. ಇದೇ ರೀತಿ ನನ್ನ ಪ್ರದರ್ಶನವನ್ನು ಮುಂದಿನ ಪಂದ್ಯದಲ್ಲೂ ತೋರಿಸಿ ವಿಜಯ ಸಾಧಿಸಬೇಕೆನ್ನುವುದು ನನ್ನ ಗುರಿ" ಎಂದರು.

ಕಪ್ತಾನ ಗ್ರೇಮ್ ಸ್ಮಿತ್ ಮಾತನಾಡುತ್ತಾ, "ನಾವೀಗ ಏನು ಸಾಧನೆ ಮಾಡಿ ಇಲ್ಲಿ ಕುಳಿತುಕೊಂಡಿದ್ದೇವೋ ಅದು ನಿಜಕ್ಕೂ ಆಶ್ಚರ್ಯ. ಅದನ್ನು ಹೇಗೆಂದು ವಿವರಿಸುವುದು ಕಷ್ಟ. ಮುಗುಳ್ನಕ್ಕು ಸುಮ್ಮನಾಗುವುದೇ ಉತ್ತಮ ಹಾದಿ ಎಂದೆನಿಸುತ್ತಿದೆ" ಎಂದು ಹೇಳಿದ್ದಾರೆ.

ಮೊಣಕೈ ಗಾಯದ ಹೊರತಾಗಿಯ‌ೂ ಈ ಆರಂಭಿಕ ಆಟಗಾರ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಇನ್ನಿಂಗ್ಸುಗಳಲ್ಲಿ 73.25ರ ಸರಾಸರಿಯಲ್ಲಿ 293 ರನ್ ಪೇರಿಸಿ 2008ರ ಅಗ್ರ ರನ್ ಗಳಿಕೆಯ ದಾಂಡಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

"ನನ್ನ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ಬಂದಿದೆ. ಹಾಗಂತ ಈ ಹಿಂದಿನವರ ಬಗ್ಗೆ ಅಗೌರವದ ಮಾತುಗಳೆಂದು ಇದರ ಅರ್ಥವಲ್ಲ. ಈ ಹಿಂದೆ ಅಂತಹಾ ಅವಕಾಶಗಳನ್ನು ಪಡೆದವರು ಮತ್ತು ಪಡೆಯದವರ ಬಗ್ಗೆ ಮತ್ತು ನಮ್ಮ ಕ್ರೀಡಾ ಇತಿಹಾಸದ ಬಗ್ಗೆ ಹೆಮ್ಮೆ ಮತ್ತು ಗೌರವ ಹೊಂದಿದ್ದೇವೆ. ಆದರೆ ನನ್ನ ಪ್ರಕಾರ ದಕ್ಷಿಣ ಆಫ್ರಿಕಾ ಈ ಹಿಂದೆ ಮಾಡಿರದಂತಹ ಅದ್ಭುತ ಸಾಧನೆಯನ್ನು ಈಗ ಮಾಡಿದೆ. ಈ ಫಲಿತಾಂಶದಿಂದ ನಾನು ರೋಮಾಂಚನಗೊಂಡಿದ್ದೇನೆ. ಇದರಲ್ಲಿ ಯಾರಿಗೂ ಚರ್ಚಾಸ್ಪದ ವಿಚಾರಗಳಿಲ್ಲ ಎಂದುಕೊಂಡಿದ್ದೇನೆ" ಎಂದು ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ