ಏಕದಿನಕ್ಕೆ ಆರ್‌ಪಿ ಸಿಂಗ್ ಆಯ್ಕೆ; ಅಚ್ಚರಿಗೊಳಗಾದ ಅಕ್ರಂ

ಮಂಗಳವಾರ, 30 ಆಗಸ್ಟ್ 2011 (09:21 IST)
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿನ ಟೀಮ್ ಇಂಡಿಯಾಕ್ಕೆ ಉತ್ತರ ಪ್ರದೇಶ ವೇಗಿ ಆರ್‌ಪಿ ಸಿಂಗ್ ಅವರನ್ನು ಆಯ್ಕೆ ಮಾಡಿರುವುದರ ಬಗ್ಗೆ ಪಾಕಿಸ್ತಾನ ಮಾಜಿ ನಾಯಕ ವಾಸೀಮ್ ಅಕ್ರಂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಏಕದಿನ ತಂಡದಲ್ಲಿ ಆರ್‌ಪಿ ಸಿಂಗ್ ಏನು ಮಾಡಲಿದ್ದಾರೆ ಎಂಬುದು ನನ್ನಲ್ಲಿ ಅಚ್ಚರಿಗೆ ಕಾರಣವಾಗಿದೆ. ಓವಲ್‌ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಕಳೆಗುಂದಿದ್ದ ಆರ್‌ಪಿ ಸಿಂಗ್ ಎಲ್ಲಿಯಾದರೂ ಉತ್ತಮ ಪ್ರದರ್ಶನ ನೀಡಿದ್ದಲ್ಲಿ ಅಂದೊಂದು ಪವಾಡವೇ ಸರಿ ಎಂದಿದ್ದಾರೆ.

ಗಾಯಾಳು ವೇಗಿ ಜಹೀರ್ ಖಾನ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಆರ್.ಪಿ. ಸಿಂಗ್ ಮೂರು ವರ್ಷಗಳ ನಂತರ ಭಾರತೀಯ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪರಿಣಾಮಕಾರಿ ಎನಿಸಿಕೊಳ್ಳುವಲ್ಲಿ ವಿಫಲರಾಗಿದ್ದರು.

ಏತನ್ಮಧ್ಯೆ ಜಾರ್ಖಂಡ್ ಯುವ ವೇಗಿ ವರುಣ್ ಆರೋನ್ ಆಯ್ಕೆಯನ್ನು ಉತ್ತಮ ನಡೆ ಎಂದು ಅಕ್ರಂ ತಿಳಿಸಿದ್ದಾರೆ. ಜಮ್ಶೆಡ್‌ಪುರ ಯುವ ವೇಗಿಯನ್ನು ತಂಡದಲ್ಲಿ ಸೇರಿಸಿಕೊಂಡಿರುವುದು ಉತ್ತಮ ನಿರ್ಧಾರವಾಗಿದೆ. ಯಾಕೆಂದರೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭಾರತಕ್ಕೆ ಹೊಸ ಮುಖಗಳ ಅಗತ್ಯವಿದೆ ಎಂದರು.

ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಸೇರಿಕೊಳ್ಳುವ ಮುನ್ನ ಕೊಲ್ಕತಾ ತಂಡದಲ್ಲಿದ್ದ ಸಂದರ್ಭದಲ್ಲಿ ವರುಣ್ ಬೌಲಿಂಗ್‌ನಿಂದ ಅಕ್ರಂ ಪ್ರಭಾವಿತರಾಗಿದ್ದರು.

ಇದೇ ಸಂದರ್ಭದಲ್ಲಿ ಔಟ್ ಆಫ್ ಫಾರ್ಮ್‌ನಲ್ಲಿರುವ ಸುರೇಶ್ ರೈನಾ ಬಗ್ಗೆ ಅಕ್ರಂ ಅನುಕಂಪ ವ್ಯಕ್ತಪಡಿಸಿದ್ದಾರೆ. ರೈನಾ ಇದೀಗ ತಮ್ಮ ತಪ್ಪಿನಿಂದ ಪಾಠ ಕಲಿಯಬೇಕಾಗಿದೆ. ಆದರೆ ಅಷ್ಟೊಂದು ಪ್ರತಿಭಾವಂತ ಆಟಗಾರ ಸಮಸ್ಯೆ ಎದುರಿಸುತ್ತಿರುವುದು ತುಂಬಾನೇ ಬೇಸರ ತರಿಸಿದೆ ಎಂದರು.

ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್ ತಾತ್ಕಾಲಿಕವಾಗಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸೇವೆಯನ್ನು ಪಡೆಯುವಂತೆ ಅಕ್ರಂ ಸಲಹೆ ಮಾಡಿದರು. ಮಿಶ್ರಾ ಅವರಿಗೆ ಸಾಕಷ್ಟು ಕಲಿಯಲಿಕ್ಕಿದೆ. ಹೀಗಾಗಿ ಶೇನ್ ವಾರ್ನ್‌ರಂತಹ ಶ್ರೇಷ್ಠ ಬೌಲರುಗಳಿಂದ ಮಾರ್ಗದರ್ಶನ ಪಡೆಯುವುದು ಬಿಸಿಸಿಐ ಪಾಲಿಗೆ ಉತ್ತಮವಾಗಿರಲಿದೆ ಎಂದರು.

ವೆಬ್ದುನಿಯಾವನ್ನು ಓದಿ