ಏಕದಿನದಲ್ಲಿ ಜೀವನಶ್ರೇಷ್ಠ 18ನೇ ಸ್ಥಾನಕ್ಕೇರಿದ ಅಶ್ವಿನ್

ಗುರುವಾರ, 8 ಡಿಸೆಂಬರ್ 2011 (11:33 IST)
PTI
ಇತ್ತೀಚೆಗಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ಮಟ್ಟ ಕಾಯ್ದುಕೊಂಡು ಬಂದಿರುವ ಭಾರತದ ಆಫ್ ಸ್ಪಿನ್ನರ್ ಆರ್. ಅಶ್ವಿನ್, ಐಸಿಸಿ ನೂತನವಾಗಿ ಬಿಡುಗಡೆ ಮಾಡಿರುವ ಏಕದಿನ ಬೌಲಿಂಗ್ ರ‌್ಯಾಂಕಿಂಗ್ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಜೀವನಶ್ರೇಷ್ಠ 18ನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆ ಮೂಲಕ ಅಗ್ರ 20ರ ಪಟ್ಟಿಯೊಳಗೆ ಕಾಣಿಸಿಕೊಳ್ಳುವಲ್ಲಿ ಈ ತಮಿಳುನಾಡು ಸ್ಪಿನ್ನರ್ ಯಶಸ್ವಿಯಾಗಿದ್ದಾರೆ. ಮೂರು ಸ್ಥಾನಗಳ ನೆಗೆತ ಕಂಡಿರುವ ಅಶ್ವಿನ್ ಬಳಿಯೀಗ 620 ಅಂಕಗಳಿವೆ.

ಮತ್ತೊಂದೆಡೆ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ಒಂದು ಸ್ಥಾನ ಬಡ್ತಿ ಪಡೆದು ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. 766 ಅಂಕ ಸಂಪಾದಿಸಿರುವ ವಿರಾಟ್ ಇದೀಗ, ನಾಯಕ ಮಹೇಂದ್ರ ಸಿಂಗ್ ಧೋನಿ ಜತೆ ಕಾಣಿಸಿಕೊಂಡಿದ್ದಾರೆ. ವಿಂಡೀಸ್ ಏಕದಿನ ಸರಣಿಯಿಂದ ಹೊರಗುಳಿದಿರುವ ಧೋನಿ ಒಂದು ಸ್ಥಾನ ಕುಸಿತ ಅನುಭವಿಸಿದ್ದಾರೆ.

ಹಾಗೆಯೇ ವಿಂಡೀಸ್ ಸರಣಿಯಲ್ಲಿ ಮೂರು ಅರ್ಧಶತಕಗಳ ಸಾಧನೆ ಮಾಡಿರುವ ರೋಹಿತ್ ಶರ್ಮಾ 21 ಸ್ಥಾನಗಳ ಭರ್ಜರಿ ನೆಗೆತ ಕಂಡು 35ನೇ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ಗೌತಮ್ ಗಂಭೀರ್ ಏಳು ಸ್ಥಾನಗಳನ್ನು ಕಳೆದುಕೊಂಡು 19ನೇ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಜೆಪಿ ಡ್ಯುಮಿನಿ ಜತೆ ಹಂಚಿಕೊಂಡಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ಅಧಿಪತ್ಯ ಮುಂದುವರಿದಿದ್ದು, ಹಾಶೀಮ್ ಆಮ್ಲಾ, ಎಬಿ ಡಿ ವಿಲಿಯರ್ಸ್ ಮತ್ತು ಜಾನಥನ್ ಟ್ರಾಟ್ ಮೊದಲ ಮೂರು ಸ್ಥಾನಗಳನ್ನು ಆಲಂಕರಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ