ಏಷ್ಯಾದಲ್ಲಿ ಕ್ರಿಕೆಟ್ ಪಾರಮ್ಯಕ್ಕಾಗಿ ಹೋರಾಟ

ಸೋಮವಾರ, 23 ಜೂನ್ 2008 (19:15 IST)
ನಾಲ್ಕು ವರ್ಷಗಳ ಬಳಿಕ, ಏಷ್ಯಾ ಖಂಡದ ಪ್ರಾದೇಶಿಕ ಪಾರಮ್ಯಕ್ಕಾಗಿ ಏಷ್ಯಾ ಕಪ್ ಕ್ರಿಕೆಟ್ ಹೋರಾಟ ಮಂಗಳವಾರ ಅನಾವರಣಗೊಳ್ಳಲಿದೆ. ಇಲ್ಲಿ ಹಣಕ್ಕಿಂತ ರಾಷ್ಟ್ರ ಪ್ರತಿಷ್ಠೆಯೇ ಮುಖ್ಯವಾಗುತ್ತಿದ್ದು, ಉಪಖಂಡದ ಅತ್ಯುತ್ತಮ ಕ್ರಿಕೆಟಿಗರು ತಮ್ಮ ಇರವು ಸಾಬೀತುಪಡಿಸಲು ವೇದಿಕೆಯಾಗಿದೆ.

ಆರಂಭಿಕ ದಿನವಾದ ಮಂಗಳವಾರ ಬಾಂಗ್ಲಾ ದೇಶವು ಕ್ರಿಕೆಟ್ ಶಿಶು ಯುನೈಟೆಡ್ ಅರಬ್ ಎಮಿರೇಟ್ಸ್ ಎದುರು ಲಾಹೋರ್‌ನಲ್ಲಿ ಸೆಣಸಲಿದ್ದರೆ, ಆತಿಥೇಯ ಪಾಕಿಸ್ತಾನವು ಹಾಂಕಾಂಗ್ ವಿರುದ್ಧ ಕರಾಚಿಯಲ್ಲಿ ಹೋರಾಡಲಿದೆ.

ಈ ಆರು ರಾಷ್ಟ್ರಗಳ ಸರಣಿಯು ಕೊನೆಯ ಬಾರಿಗೆ ನಡೆದದ್ದು ಶ್ರೀಲಂಕಾದಲ್ಲಿ 2004ರಲ್ಲಿ. 1983-84ರಲ್ಲಿ ಆರಂಭವಾದಾಗಿನಿಂದ ಭಾರತ ಮತ್ತು ಪಾಕಿಸ್ತಾನಗಳ ರಾಜಕೀಯ ಕ್ಷೋಭೆಯಿಂದಾಗಿ ಏಷ್ಯಾ ಕಪ್ ಟೂರ್ನಮೆಂಟ್‌ಗಳ ಸಂಖ್ಯೆಯ ಮೇಲೆ ಕರಿನೆರಳು ಬಿದ್ದಿತ್ತು.

ಇತ್ತೀಚೆಗೆ ಬಾಂಗ್ಲಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನವು ಭಾರತ ವಿರುದ್ಧ ಮೇಲುಗೈ ಸಾಧಿಸಿದ್ದು, ಸಾಂಪ್ರದಾಯಿಕ ಎದುರಾಳಿಗಳು ತಮ್ಮ ಹೋರಾಟದ ಕೆಚ್ಚನ್ನು ಇಲ್ಲೂ ಮುಂದುವರಿಸಲಿದ್ದಾರೆ.

ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವೆಯೇ ನೈಜ ಹೋರಾಟ ಏರ್ಪಡಲಿದ್ದು, ಹಾಂಕಾಂಗ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಪ್ರಬಲ ಎದುರಾಳಿಗಳನ್ನು ಮಣಿಸುವುದು ಹೇಗೆಂಬ ಬಗ್ಗೆ ಕೆಲವೊಂದು ತಂತ್ರಗಳನ್ನು ಅಳವಡಿಸಲು ಕಲಿತುಕೊಳ್ಳಬಹುದು.

ಕೆಲವೊಂದು ಪಂದ್ಯಗಳನ್ನು ಹೊರತುಪಡಿಸಿದರೆ, ಪ್ರಬಲ ತಂಡಗಳೊಂದಿಗೆ ಹೋರಾಡುವಾಗ ಬಾಂಗ್ಲಾ ದೇಶ ಯಾವತ್ತೂ ದಯನೀಯ ವೈಫಲ್ಯ ಕಂಡಿತ್ತು. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ಇಮೇಜ್ ಕಳಚಿಕೊಳ್ಳಲು ಬಾಂಗ್ಲಾ ತಂಡವು ಈ ಸರಣಿಯಲ್ಲಿ ಶ್ರಮಿಸಬಹುದು ಮತ್ತು ಕೆಲವೊಂದು ಅಚ್ಚರಿಯ ಆಘಾತವನ್ನೂ ನೀಡಲು ಸಜ್ಜಾಗಬಹುದಾಗಿದೆ.

ಪಾಕಿಸ್ತಾನದ ರಾಜಕೀಯ ಕ್ಷೋಭೆಯಿಂದಾಗಿ ಹಲವು ರಾಷ್ಟ್ರಗಳು ಇಲ್ಲಿ ಕ್ರಿಕೆಟ್ ಆಡಲು ಹಿಂಜರಿಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಭೂತಪೂರ್ವ ಭದ್ರತೆಯಲ್ಲಿ ಸರಣಿ ನಡೆಯುತ್ತಿದ್ದು, ಟೂರ್ನಿಯು ಸುಲಲಿತವಾಗಿ ನಡೆಯುವಂತಾಗಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕಾತರದಿಂದಲೇ ನಿರೀಕ್ಷಿಸುತ್ತಿದೆ.

ವೆಬ್ದುನಿಯಾವನ್ನು ಓದಿ