ಐಪಿಎಲ್ : ಗೆಲುವಿನ ಕನಸಲ್ಲಿ ನೈಟ್ ರೈಡರ್ಸ್ ತಂಡ

ಶುಕ್ರವಾರ, 3 ಮೇ 2013 (15:03 IST)
PTI
ಹಾಲಿ ಚಾಂಪಿಯನ್ ಎಂಬ ಹಣೆಪಟ್ಟಿ ಹೊತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಪಡೆ, ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡ ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ 3ರಲ್ಲಿ ಗೆದ್ದರೆ, ರಾಜಸ್ಥಾನ ರಾಯಲ್ಸ್ ತಂಡ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದ ರಾಜಸ್ಥಾನ ತಂಡ ಗೆಲ್ಲುವ ಫೇವರಿಟ್ ಎನಿಸಿದೆ.

ಪ್ರಸಕ್ತ ಆವೃತ್ತಿಯಲ್ಲಿ ಕೋಲ್ಕತಾ ತಂಡ ಪ್ರದರ್ಶನ ನೀಡುತ್ತಿರುವುದನ್ನು ನೋಡಿದರೆ, ಕಳೆದ ಬಾರಿ ಗೌತಮ್ ಗಂಭೀರ್ ಪಡೆ ಪ್ರಶಸ್ತಿ ದೊರಕಿದ್ದು ಅದೃಷ್ಟದ ಬಲದಿಂದ ಇರಬಹುದೇ? ಎಂಬ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ.

ಆರಂಭದಲ್ಲಿ ಎಲ್ಲ ಪಂದ್ಯಗಳಲ್ಲಿ ಸೋಲನುಭವಿಸಿದ್ದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಈಗ ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ, ಕೋಲ್ಕತಾ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿರುವುದು ತಂಡಕ್ಕೆ ಆತಂಕವಾಗಿ ಪರಿಣಮಿಸಿದೆ.

ಯೂಸುಫ್ ಪಠಾಣ್ ಮತ್ತು ದಕ್ಷಿಣ ಆಫ್ರಿಕಾದ ದಂತಕತೆ ಜಾಕ್ ಕಾಲಿಸ್ ವೈಫಲ್ಯ ಕಂಡಿದ್ದು, ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ನೈಟ್ ರೈಡರ್ಸ್ ಸೋಲನುಭವಿಸಲು ಕಾರಣವಾಯಿತು. ಬ್ರೆಂಡನ್ ಮೆಕಲಂ ಮತ್ತು ರೆಯಾನ್ ಟೆನ್ ಡಯಶೆಟ್ ಅವರಿಗೆ ಆಡುವ 11 ಆಟಗಾರರಲ್ಲಿ ಸ್ಥಾನ ದೊರಕುವುದೇ ಎಂಬುದು ಕುತೂಹಲ ಉಂಟುಮಾಡಿದೆ.

ಡೆಲ್ಲಿ ವಿರುದ್ಧದ ಕಳೆದ ಪಂದ್ಯದಲ್ಲಿ ಸಾಧಾರಣ ಮೊತ್ತ ಕಲೆ ಹಾಕಿದ್ದ ಕೋಲ್ಕತಾ ನೈಟ್ ರೈಡರ್ಸ್, ಫೀಲ್ಡಿಂಗ್ ಮಾಡುವಾಗ ಎರಡು ಕ್ಯಾಚ್ ಕೈಬಿಟ್ಟಿದ್ದು ಮತ್ತು ಮನ್ವಿಂದರ್ ಬಿಸ್ಲಾ ಅವರು ಡೇವಿಡ್ ವಾರ್ನರ್ ಸ್ಟಂಪೌಟ್ ಅವಕಾಶ ಕೈಚೆಲ್ಲಿದ್ದು ಸೋಲಿಗೆ ಪ್ರಮುಖ ಕಾರಣಗಳಾಗಿದ್ದವು.

ಹೀಗಾಗಿ ಈಗ ಕೋಲ್ಕತಾ ತಂಡ ಪ್ಲೇ ಆಫ್ ಹಂತಕ್ಕೆ ಅವಕಾಶ ಗಿಟ್ಟಿಸಬೇಕಾದರೆ, ಉಳಿದಿರುವ ಆರೂ ಪಂದ್ಯಗಳಲ್ಲಿ ಜಯ ಕಾಣುವ ಅಗತ್ಯವಿದೆ. ಇದು ನಡೆಯಬೇಕಾದರೆ ಅಚ್ಚರಿ ಪವಾಡವೇ ನಡೆಯಬೇಕಾಗಿದೆ.

ಇನ್ನೊಂದೆಡೆ ರಾಹುಲ್ ದ್ರಾವಿಡ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಗಮನ ಸೆಳೆಯುವ ಪ್ರದರ್ಶನ ನೀಡುತ್ತಿದ್ದು, ಪ್ಲೇ ಆಫ್ ಪ್ರವೇಶಿಸುವ ಭರವಸೆ ಹೊಂದಿದೆ. ಆದರೆ, ಇನ್ನು ಕನಿಷ್ಠ ಮೂರು ಪಂದ್ಯಗಳನ್ನಾದರೂ ಗೆದ್ದರೆ, ರಾಜಸ್ಥಾನ ಪ್ಲೇ ಆಫ್ ಹಂತ ಪ್ರವೇಶಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 172 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ರಾಜಸ್ಥಾನಕ್ಕೆ, ಯುವ ಆಟಗಾರ ಸಂಜು ಸಾಮ್ಸನ್ ಮೂರನೇ ಕ್ರಮಾಂಕದಲ್ಲಿ ಪ್ರತಿಭಾನ್ವಿತ ಬ್ಯಾಟಿಂಗ್ ನಡೆಸುವ ಮೂಲಕ ಜಯ ತಂದುಕೊಟ್ಟಿದ್ದರು. ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಅದ್ಭುತ ಫಾರ್ಮ್‌ನಲ್ಲಿದ್ದು ಕಳೆದ ಮೂರು ಪಂದ್ಯಗಳಲ್ಲಿ ರಾಜಸ್ಥಾನ ತಂಡದ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ವ್ಯಾಟ್ಸನ್ ಜತೆಗೆ ಬ್ರಾಡ್ ಹಾಡ್ಜ್ ಹಾಗೂ ಓವೈಸ್ ಶಾ ಹಾಗೂ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ.

ಜೇಮ್ಸ್ ಫಾಕ್ನರ್, ಸ್ಪಿನ್ನರ್ ಅಜಿತ್ ಚಾಂಡಿಲ್ ಹಾಗೂ ಬೌಲಿಂಗ್ ವಿಭಾಗದಲ್ಲಿ ರಾಜಸ್ಥಾನದ ಶಕ್ತಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ