ಕ್ರಿಕೆಟ್; ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಕಿವೀಸ್

ಶನಿವಾರ, 29 ಜೂನ್ 2013 (13:44 IST)
PTI
ಭಾರೀ ಮಳೆಯಿಂದಾಗಿ ಇಂಗ್ಲಂಡ್‌-ನ್ಯೂಜಿಲಂಡ್‌ ನಡುವಿನ ದ್ವಿತೀಯ ಟಿ-20 ಪಂದ್ಯ ಎರಡೇ ಎಸೆತಗಳಿಗೆ ಕೊನೆಗೊಂಡಿದೆ. ಇದರೊಂದಿಗೆ ಮೊದಲ ಪಂದ್ಯವನ್ನು 5 ರನ್ನುಗಳಿಂದ ಗೆದ್ದ ಕಿವೀಸ್‌ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ.

'ಕೆನ್ನಿಂಗ್ಟನ್‌ ಓವಲ್‌'ನಲ್ಲಿ ಗುರುವಾರ ಅಹರ್ನಿಶಿಯಾಗಿ ನಡೆಯಬೇಕಿದ್ದ ಈ ಪಂದ್ಯ ಕೇವಲ 2 ಎಸೆತ, 2 ನಿಮಿಷ ಹಾಗೂ 2 ರನ್ನಿಗಷ್ಟೇ ಸೀಮಿತಗೊಂಡಿತು. ನಡುವಲ್ಲೊಮ್ಮೆ 6 ಓವರ್‌ಗಳ ಪಂದ್ಯ ನಡೆಸುವ ಬಗ್ಗೆ ಯೋಜಿಸಲಾಯಿತಾದರೂ ಇದಕ್ಕೂ ಮಳೆ ಅಡ್ಡಗಾಲಿಕ್ಕಿತು.

ಟಾಸ್‌ ಗೆದ್ದ ನ್ಯೂಜಿಲಂಡ್‌ ಇಂಗ್ಲಂಡನ್ನು ಬ್ಯಾಟಿಂಗಿಗೆ ಇಳಿಸಿತು. ದ್ವಿತೀಯ ಎಸೆತದಲ್ಲೇ ಮಿಚೆಲ್‌ ಮೆಕ್ಲೆನಗನ್‌ ಇಂಗ್ಲಂಡ್‌ ಓಪನರ್‌ ಮೈಕಲ್‌ ಲಂಬ್‌ (2) ಅವರ ವಿಕೆಟ್‌ ಹಾರಿಸಿದೊಡನೆಯೇ ಸುರಿಯತೊಡಗಿದ ಮಳೆ ಮತ್ತೆ ಆಟಗಾರರಿಗೆ ಮೈದಾನಕ್ಕಿಳಿಯಲು ಆಸ್ಪದವನ್ನೇ ನೀಡಲಿಲ್ಲ.

ಇದರಿಂದ ಮರಳಿ ತಂಡವನ್ನು ಸೇರಿಕೊಂಡ ಕೆವಿನ್‌ ಪೀಟರ್‌ಸನ್‌ ಅವರ ಬ್ಯಾಟಿಂಗ್‌ ನೋಡುವ ಅವಕಾಶದಿಂದ ಇಂಗ್ಲಂಡ್‌ ಅಭಿಮಾನಿಗಳು ವಂಚಿತರಾಗಬೇಕಾಯಿತು.

ಎವೋಯಿನ್‌ ಮಾರ್ಗನ್‌ ಗಾಯಾಳಾದ್ದರಿಂದ ಇಂಗ್ಲಂಡ್‌ ತಂಡದ ನಾಯಕತ್ವವನ್ನು ಸ್ಪಿನ್ನರ್‌ ಜೇಮ್ಸ್‌ ಟ್ರೆಡ್‌ವೆಲ್‌ ಅವರಿಗೆ ವಹಿಸಲಾಗಿತ್ತು. ಬಲಗೈ ಬೆರಳಿನ ಗಾಯಕ್ಕೊಳಗಾಗಿರುವ ಮಾರ್ಗನ್‌ ಅವರಿಗೆ ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ ವೇಳೆ ಮಾರ್ಗನ್‌ಗೆ ಈ ಸಮಸ್ಯೆ ಎದುರಾಗಿತ್ತು. ಬಳಿಕ ನೋವಿನಲ್ಲೇ ಅವರು ಭಾರತ ಎದುರಿನ ಫೈನಲ್‌ ಆಡಿದ್ದರು.

ವೆಬ್ದುನಿಯಾವನ್ನು ಓದಿ