ಗಂಗೂಲಿಗೆ ನೀ ಯಾರೆಂದು ಪ್ರಶ್ನಿಸಿದ ಅಧಿಕಾರಿ

ಗುರುವಾರ, 27 ಅಕ್ಟೋಬರ್ 2011 (11:53 IST)
PTI
ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಥಳೀಯ ಯುವರಾಜ ಸೌರವ್ ಗಂಗೂಲಿ ಅವರನ್ನೇ ನೀ ಯಾರೆಂದು ಪ್ರಶ್ನಿಸಿದ ಘಟನೆ ವರದಿಯಾಗಿದೆ.

ಈಡನ್ ಗಾರ್ಡನ್‌ನಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವೆ ಮಂಗಳವಾರ ನಡೆದ ಪಂದ್ಯದ ವೇಳೆ ಗಂಗೂಲಿ ಮೊದಲ ಬಾರಿಗೆ ಈಡನ್ ಗಾರ್ಡನ್‌ನಲ್ಲಿ ವಿಕ್ಷಕ ವಿವರಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದೆ.

ವೀಕ್ಷಕ ವಿವರಣೆಕಾರರ ಕೊಠಡಿಯಲ್ಲಿಯೇ ತನ್ನ ಗುರುತಿನ ಚೀಟಿ ಬಿಟ್ಟು ಪಿಚ್ ವರದಿ ನೀಡಲು ಗಂಗೂಲಿ ಮೈದಾನ ಪ್ರವೇಶಿಸುತ್ತಿದ್ದರು. ಆ ಸಂದರ್ಭದಲ್ಲಿ ಗಂಗೂಲಿಯವರನ್ನು ತಡೆದ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಅದಿಕಾರಿ ಧರ್ಮೇಂದ್ರ ಸಿಂಗ್ ಯಾದವ್, ನೀನು ಯಾರೆಂದು ಗಂಗೂಲಿಯವರನ್ನು ಪ್ರಶ್ನಿಸಿದರು. ಆಗ ಟೀಂ ಇಂಡಿಯಾ ಮಾಜಿ ನಾಯಕ ಕೂಲ್ ಆಗಿಯೇ ನಾನು ಸೌರವ್ ಗಂಗೂಲಿ, ಪಿಚ್ ವರದಿ ಕೊಡಲು ಹೋಗುತ್ತಿದ್ದೇನೆ ಎಂದು ವಿನಯವಾಗಿ ಪ್ರತಿಕ್ರಿಯಿಸಿದರು.

ಆದರೆ, ಗಂಗೂಲಿಯ ಉತ್ತರದಿಂದ ತೃಪ್ತಿಯಾಗದ ಯಾದವ್, ಹಾಗಿದ್ದಲ್ಲಿ ನಿಮ್ಮ ಗುರುತಿನ ಚೀಟಿ ತೋರಿಸಿ ಎಂದು ಮರುಪ್ರಶ್ನೆ ಹಾಕಿದರು.ನಾನು ವೀಕ್ಷಕ ವಿವರಣೆಕಾರರ ಕೊಠಡಿಯಲ್ಲಿಯೇ ಬಿಟ್ಟು ಬಂದಿದ್ದೇನೆ ಎಂದೂ ಗಂಗೂಲಿ ಹೇಳಿದರು. ಬಳಿಕ ಅವರು ಅಲ್ಲಿಂದ ತೆರಳಿ ವಿವರಣೆಕಾರರ ಕೊಠಡಿಯಲ್ಲಿದ್ದ ತಮ್ಮ ಗುರುತಿನ ಪತ್ರ ತೆಗೆದುಕೊಂಡು ಬಂದು ತೋರಿಸಿ, ಮೈದಾನ ಪ್ರವೇಶಿಸಲು ಅನುಮತಿ ಕೇಳಿದರು. ನಂತರವಷ್ಟೆ ಗಂಗೂಲಿಗೆ ಮೈದಾನ ಪ್ರವೇಶಿಸಲು ಯಾದವ್ ಪರವಾನಿಗಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ