ಚಾಂಡಿಲ್‌ಗೆ ದಾವೂದ್ ನೇರ ಸಂಪರ್ಕ:ಪೊಲೀಸ್

ಮಂಗಳವಾರ, 18 ಜೂನ್ 2013 (13:27 IST)
PTI
ಅಮಾನತುಗೊಂಡಿರುವ ರಾಜಸ್ಥಾನ್‌ ರಾಯಲ್ಸ್‌ ಕ್ರಿಕೆಟಿಗ ಅಜಿತ್‌ ಚಾಂಡಿಲ ಅವರನ್ನು ದಿಲ್ಲಿ ನ್ಯಾಯಾಲಯ 3 ದಿನಗಳ ಕಾಲ ಪೊಲೀಸ್‌ ವಶಕ್ಕೊಪ್ಪಿಸಿದೆ. ಚಾಂಡಿಲ ವಿಚಾರಣೆ ಮೋಕಾ ಕಾಯ್ದೆಯಡಿ ನಡೆಯಲಿದೆ.

ಚಾಂಡಿಲ ಅವರೇ ಇಡೀ ಪ್ರಕರಣದ ಮುಖ್ಯ ಸೂತ್ರಧಾರ. ಅವರಿಗೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಅವರ ನೇರ ಸಂಬಂಧವಿದೆ, ದಾವೂದ್‌ ಗುಂಪಿನ ಕೊಂಡಿಯಂತೆ ಅವರು ಕೆಲಸ ಮಾಡುತ್ತಿದ್ದಾರೆ ಎಂದು ವಿಚಾರಣೆ ವೇಳೆ ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಚಾಂಡಿಲ ಅವರನ್ನು ಪೊಲೀಸ್‌ ವಶಕ್ಕೊಪ್ಪಿಸಿತು.

ಸೋಮವಾರವೂ ತಮ್ಮ ಎಂದಿನ ವಾದ ಮುಂದುವರಿಸಿದ ಪೊಲೀಸರು, ಚಾಂಡಿಲ ಅವರು ಆಟಗಾರರು-ಬುಕ್ಕಿಗಳ ನಡುವೆ ಕೊಂಡಿಯಂತೆ ಕೆಲಸ ಮಾಡಿದರು, ಬುಕ್ಕಿಗಳ ನಿರ್ದೇಶನದಂತೆ ಕೆಲಸ ಮಾಡಲು ಭಾರೀ ಹಣವನ್ನೂ ಪಡೆದಿದ್ದಾರೆ ಎಂದು ಬಲವಾಗಿ ಹೇಳಿದರು.

ನಾಲ್ವರು ಬುಕ್ಕಿಗಳ ವಿಚಾರಣೆ

ಬುಕ್ಕಿಗಳಾದ ರಮೇಶ್‌ ವ್ಯಾಸ್‌, ಸುನಿಲ್‌ ಭಾಟಿಯ, ಫಿರೋಜ್‌ ಅನ್ಸಾರಿ ಅವರು, ಬುಕ್ಕಿಗಳು ಮತ್ತು ಆಟಗಾರರ ನಡುವಿನ ಹೊಂದಾಣಿಕೆಯ ಬಗ್ಗೆ ಹೆಚ್ಚು ಮಾಹಿತಿ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಿದರು. ರಮೇಶ್‌ ವ್ಯಾಸ್‌ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ.

ಮೇ 16ರಂದು ದಿಲ್ಲಿ ಪೊಲೀಸರು ಶ್ರೀಶಾಂತ್‌, ಅಂಕಿತ್‌ ಚೌಹಾಣ್‌, ಅಜಿತ್‌ ಚಾಂಡಿಲರನ್ನು ಬಂಧಿಸಿ ಮೋಕಾ ಕಾಯ್ದೆ ಹೇರಿದ್ದರು. ಕಳೆದ ವಾರ ಶ್ರೀಶಾಂತ್‌ ಮತ್ತು ಅಂಕಿತ್‌ಗೆ ನ್ಯಾಯಾಲಯ ಜಾಮೀನು ನೀಡಿತ್ತು.

ವೆಬ್ದುನಿಯಾವನ್ನು ಓದಿ