'ಚೆಕರ್ಡ್ ಫ್ಲಾಗ್' ಹಾರಿಸಿರುವುದು ಸ್ಮರಣೀಯ ಅನುಭವ: ಸಚಿನ್

ಸೋಮವಾರ, 31 ಅಕ್ಟೋಬರ್ 2011 (13:24 IST)
PTI


ಇಂಡಿಯನ್ ಗ್ರಾಂಡ್ ಪ್ರೀ ಫಾರ್ಮುಲಾ ಓನ್ ರೇಸ್‌ನ ಅಂತಿಮ ಘಟ್ಟದಲ್ಲಿ 'ಚೆಕರ್ಡ್ ಫ್ಲಾಗ್' ಹಾರಿಸಿರುವುದು ಸ್ಮರಣೀಯ ಅನುಭವ ಎಂದು ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

PTI


ಫಾರ್ಮುಲಾ ಒನ್ ರೇಸ್‌ನ ಅಂತಿಮ ಲ್ಯಾಪ್‌ನಲ್ಲಿ ವಿಜಯಿ ಯಾರು ಎಂದು ನಿರ್ಣಯಿಸುವ ಸಲುವಾಗಿ ಕಪ್ಪು ಬಿಳಿ ಚೌಕ (ಚೆಕರ್ಡ್ ಫ್ಲಾಗ್) ಹೊಂದಿರುವ ಬಾವುಟವನ್ನು ಹಾರಿಸಲಾಗುತ್ತದೆ. ಅಂತಹ ಕಪ್ಪು ಬಿಳಿ ಬಣ್ಣವುಳ ಬಾವುಟ ಹಾರಿಸಿರುವ ಕ್ಷಣವನ್ನು ನೆನಪಿನಲ್ಲುಳಿಯುವ ಅನುಭವ ಎಂದು ಸಚಿನ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬರೆದಿದ್ದಾರೆ.

PTI


ಭಾರತದ ಪ್ರಪ್ರಥಮ ಫಾರ್ಮುಲಾ ಒನ್ ರೇಸನ್ನು ಪತ್ನಿ ಅಂಜಲಿ ಹಾಗೂ ಪುತ್ರಿ ಸಾರಾ ಜತೆ ಸಚಿನ್ ವೀಕ್ಷಿಸಿದ್ದರು. ಅಲ್ಲದೆ ಫಾರ್ಮುಲಾ ಒನ್ ಚಾಂಪಿಯನ್ ರೇಸರ್ ಹಾಗೂ ತನ್ನ ಮಿತ್ರ ಆಗಿರುವ ಮೈಕಲ್ ಶೂಮಕರ್ ಅವರನ್ನು ಭೇಟಿಯಾಗಿದ್ದರು.

PTI


ಇದೇ ಸಂದರ್ಭದಲ್ಲಿ ಎಫ್-1 ಕೂಟವನ್ನು ಯಶಸ್ವಿಯಾಗಿ ಆಯೋಜಿಸಿದ ಸಂಘಟಕರಾದ ಜೆಪಿ ಗೂಪ್‌ಗೂ ಸಚಿನ್ ಅಭಿನಂದನೆಯನ್ನು ಸಲ್ಲಿಸಿದರು. ಫಾರ್ಮುಲಾ ಒನ್ ಕೂಟವನ್ನು ಜೆಪಿ ಅದ್ಭುತವಾಗಿಯೇ ಆಯೋಜಿಸಿದೆ. ವಿಶ್ವದರ್ಜೆಯ ಟ್ರ್ಯಾಕ್‌ ಸಹಿತ ಅಭಿಮಾನಿಗಳಿಗೆ ರೇಸ್ ವೀಕ್ಷಣೆಗೆ ಅದ್ಭುತ ಅವಕಾಶ ಕಲ್ಪಿಸಿಕೊಡಲಾಗಿತ್ತು. ನಮ್ಮೆಲ್ಲರ ಪಾಲಿಗದು ಸ್ಮರಣೀಯ ಕ್ಷಣವಾಗಿದೆ ಎಂದಿದ್ದಾರೆ.

PTI


ಗ್ರೇಟರ್ ನೋಯ್ಡಾದಲ್ಲಿ ನಿರ್ಮಾಣಗೊಂಡಿರುವ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ಗೆ ಸ್ವತ: ಜೇಪಿ ಸ್ಫೋರ್ಟ್ಸ್ ಇಂಟರ್‌ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಗೌರ್ ಅವರು ಕ್ರಿಕೆಟ್ ದೇವರನ್ನು ಬರಮಾಡಿಕೊಂಡಿದ್ದರು.

ಹಾಗೆಯೇ ಚೊಚ್ಚಲ ಇಂಡಿಯನ್ ಗ್ರಾಂಡ್ ಪ್ರೀ ಫಾರ್ಮುಲಾ ಒನ್ ರೇಸ್‌ನಲ್ಲಿ ಆರ್‌ಬಿಆರ್- ರೆನಾಲ್ಟ್ ತಂಡದ ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟಲ್ ಚಾಂಪಿಯನ್ ಎನಿಸಿಕೊಂಡಿದ್ದರು.

PTI


ಭಾರತದ ಪ್ರಪ್ರಥಮ ಫಾರ್ಮುಲಾ ಒನ್ ಗ್ರಾಂಡ್ ಪ್ರೀ ರೇಸ್ ವೀಕ್ಷಿಸಲು ಬಾಲಿವುಡ್ ಹಾಗೂ ಕ್ರಿಕೆಟ್ ತಾರೆಗಳ ದಂಡೇ ಆಗಮಿಸಿತ್ತು. ಬಾಲಿವುಡ್ ಬಾದ್‌ಶಾ ಶಾರೂಕ್ ಖಾನ್, ಅರ್ಜುನ್ ರಾಂಪಾಲ್, ರಾಹುಲ್ ಬೋಸ್, ಗೌರವ್ ಕಪೂರ್, ಮಧುರ್ ಭಂಡಾರ್ಕರ್, ದಿನೊ ಮಾರಿಯಾ, ಜಾಕಿ ಭಗ್ನಾನಿ, ರೋಷನ್ ಅಬ್ಬಾಸ್ ಹಾಗೂ ನಟಿಯರಾದ ಪ್ರೀತಿ ಜಿಂಟಾ, ದೀಪಿಕಾ ಪಡುಕೋಣೆ ಮೆರಗು ನೀಡಿದ್ದರು. ಸಚಿನ್ ಸಹ ಕ್ರಿಕೆಟಿಗರಾದ ಹರಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಸಹ ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ