ಚೆನ್ನೈ ವಿರುದ್ಧ ಗರ್ಜಿಸಿದ ಮ್ಯಾಕ್ಸ್‌ವೆಲ್: ಪಂಜಾಬ್‌ಗೆ ಭರ್ಜರಿ ಜಯ

ಶನಿವಾರ, 19 ಏಪ್ರಿಲ್ 2014 (12:48 IST)
ಅಬುದಾಬಿ: ಐಪಿಎಲ್ ಸೀಸನ್ ಸೆವೆನ್‌ನಲ್ಲಿ ಮ್ಯಾಕ್ಸ್‌ವೆಲ್ ಎಂಬ ಡೈನಾಮಿಕ್ ಹಿಟ್ಟರ್ ಗರ್ಜಿಸಿದ್ದಾರೆ. ಮ್ಯಾಕ್ಸ್‌ವೆಲ್ ಧೋನಿ ಪಡೆಯ ಬೆವರನ್ನೇ ಇಳಿಸಿದರು. ಮ್ಯಾಕ್ಸ್ ಸುನಾಮಿ ಬ್ಯಾಟಿಂಗ್ ದಾಳಿಗೆ ಸಿಎಸ್‌ಕೆ ಉಡೀಸ್ ಆಗಿದೆ. ಮ್ಯಾಕ್ಸ್ ವೆಲ್ ಅರಬ್ ನೆಲದಲ್ಲಿ ರನ್ ಮಳೆಯನ್ನೇ ಹರಿಸಿದರು. ಕಿಂಗ್ಸ್ ಇಲೆವೆನ್ ತಂಡದ ಆಟಗಾರ ಮ್ಯಾಕ್ಸ್‌ವೆಲ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಲೆಕ್ಕಾಚಾರವನ್ನು ಉಲ್ಟಾ ಮಾಡಿದರು. ಬೌಂಡರಿ ಸಿಡಿಸುವ ಮೂಲಕ ಇನ್ನಿಂಗ್ಸ್ ಆರಂಭಿಸಿದ ಮ್ಯಾಕ್ಸ್‌ವೆಲ್ ನೋಡು, ನೋಡುತ್ತಿದ್ದಂತೆ ಅರ್ಧಶತಕ ಸಿಡಿಸಿ ಶರವೇಗದಲ್ಲಿ ಶತಕದ ಅಂಚಿಗೆ ತಲುಪಿದರು. ಇನ್ನೇನು ಮ್ಯಾಕ್ಸ್‌ವೆಲ್ ಶತಕ ಸಿಡಿಸುತ್ತಾರೆ ಎನ್ನುವಷ್ಟರಲ್ಲಿ ಭರ್ಜರಿ 95 ರನ್‌ಗೆ ಔಟಾದರು. ಮ್ಯಾಕ್ಸ್‌ವೆಲ್ ಸ್ಕೋರಿನಲ್ಲಿ 12 ಬೌಂಡರಿಗಳು ಮತ್ತು ಎರಡು ಸಿಕ್ಸರುಗಳಿದ್ದವು. ಮ್ಯಾಕ್ಸ್‌ವೆಲ್ ಈ ಸೀಸನ್‌ನಲ್ಲಿ ಪಡೆದ 6 ಕೋಟಿ ರೂ.ಗೆ ತಕ್ಕ ನ್ಯಾಯ ಒದಗಿಸಿದರು.

PR
PR
ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ರೆಂಡನ್ ಮೆಕಲಮ್ ಮತ್ತು ಸ್ಮಿತ್ ಕೇವಲ 76 ಎಸೆತಗಳಲ್ಲಿ 123 ರನ್ ಕಲೆಹಾಕಿದರು. ಮೆಕಲಮ್ 45 ಎಸೆತಗಳಲ್ಲಿ 67 ಮತ್ತು ಸ್ಮಿತ್ 43 ಎಸೆತಗಳಲ್ಲಿ 66 ರನ್ ಬಾರಿಸಿ ಚೆನ್ನೈಗೆ ಭದ್ರ ಅಡಿಪಾಯವನ್ನು ಹಾಕಿದರು.ಮೆಕಲಮ್ ಐದು ಸಿಕ್ಸರುಗಳು ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದರೆ ಸ್ಮಿತ್ ನಾಲ್ಕು ಬೌಂಡರಿಗಳು ಮತ್ತು ಮೂರು ಸಿಕ್ಸರುಗಳನ್ನು ಹೊಡೆದರು.ಧೋನಿ ಕೂಡ ಇನ್ನಿಂಗ್ಸ್‌ನಲ್ಲಿ 11 ಎಸೆತದಳಶ 26 ರನ್ ಚಚ್ಚುವ ಮೂಲಕ ಉತ್ತಮ ಚೇತರಿಕೆಯನ್ನು ನೀಡಿದರು. ಸೂಪರ್ ಕಿಂಗ್ಸ್ 20 ಓವರುಗಳಲ್ಲಿ 205 ರನ್ ಬೃಹತ್ ಮೊತ್ತವನ್ನು ಪೇರಿಸಿ ರನ್ ಚೇಸ್ ಮಾಡುವುದು ಅಸಾಧ್ಯವೆಂಬ ಭಾವನೆ ಎಲ್ಲರಿಗೂ ಇತ್ತು.ಆದರೆ ನಂತರ ಬ್ಯಾಟಿಂಗ್‌ಗಿಳಿದ ಪಂಜಾಬ್ ಪರ ಗ್ಲೆನ್ ಮ್ಯಾಕ್ಸ್‌‍ವೆಲ್ 43 ಎಸೆತಗಳಲ್ಲಿ ಅಚ್ಚರಿಯ 95 ರನ್ ಚಚ್ಚುವ ಮೂಲಕ ಚೆನ್ನೈ ಗೆಲ್ಲುವ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ಪವರ್‌ಪ್ಲೇ ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡಾಗ ಪಂಜಾಬ್ ಸೋಲಿನ ಸುಳಿಗೆ ಸಿಲುಕಿತ್ತು. ವೀರೇಂದ್ರ ಸೆಹ್ವಾಗ್ 10 ಎಸೆತಗಳಲ್ಲಿ 19 ರನ್ ಹೊಡೆದು ಔಟಾದರು.

ಪೂಜಾರಾ ಮತ್ತು ಅಕ್ಷರ್ ಪಟೇಲ್ ಕೂಡ ಬೇಗನೇ ಔಟಾದರು. ಮ್ಯಾಕ್ಸ್‌ವೆಲ್ ಇದಕ್ಕೆ ಸೊಪ್ಪುಹಾಕದರೆ ಚೆನ್ನೈ ಬೌಲರುಗಳ ಎಸೆತಗಳನ್ನು ಹಿಗ್ಗಾಮುಗ್ಗಾ ಚಚ್ಚಿದರು. ಆಶಿಶ್ ನೆಹ್ರಾ ಮ್ಯಾಕ್ಸ್‌ವೆಲ್ ಕ್ಯಾಚನ್ನು 36 ರನ್‌ಗಳಾಗಿದ್ದಾಗ ಬಿಟ್ಟಿದ್ದು ಅವರಿಗೆ ವರದಾನವಾಯಿತು.ಪಂಜಾಬ್‌ಗೆ ಕೊನೆಯ ನಾಲ್ಕು ಓವರುಗಳಲ್ಲಿ 34 ರನ್ ಅಗತ್ಯವಿತ್ತು. ಮಿಲ್ಲರ್ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಎರಡು ಸಿಕ್ಸರುಗಳನ್ನು ಬಾರಿಸಿ ಕೊನೆಯ ಮೂರು ಓವರುಗಳಲ್ಲಿ 16 ರನ್ ಗುರಿಯನ್ನು ತಂದಿತ್ತರು.

ವೆಬ್ದುನಿಯಾವನ್ನು ಓದಿ