ಟ್ವೆಂಟಿ-20 ಕಾಲದಲ್ಲಿ ಏಕದಿನ ಕ್ರಿಕೆಟ್ ಹಾಸ್ಯಾಸ್ಪದ: ವಾರ್ನೆ

ಗುರುವಾರ, 27 ಆಗಸ್ಟ್ 2009 (15:11 IST)
ಏಕದಿನ ಪಂದ್ಯಗಳು ಅಗತ್ಯವಿಲ್ಲವೆನ್ನುವುದನ್ನು ಟ್ವೆಂಟಿ-20 ಕ್ರಿಕೆಟ್ ತೋರಿಸಿಕೊಟ್ಟಿದೆ; ಹಾಸ್ಯಾಸ್ಪದವಾಗಿರುವ ಏಕದಿನ ಪಂದ್ಯಗಳನ್ನು ಅಂತಾರಾಷ್ಟ್ರೀಯ ವೇಳಾಪಟ್ಟಿಯಿಂದ ಕೈ ಬಿಡಬೇಕು, ಕ್ರಿಕೆಟ್‌ನಲ್ಲಿ ಟೆಸ್ಟ್ ಮತ್ತು ಟ್ವೆಂಟಿ-20ಗಳೇ ಸಾಕು ಎಂದು ಆಸ್ಟ್ರೇಲಿಯಾದ ಖ್ಯಾತ ಮಾಜಿ ಲೆಗ್-ಸ್ಪಿನ್ನರ್ ಶೇನ್ ವಾರ್ನೆ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್ ಬೇಡವೆಂಬುದನ್ನು ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ಅದೀಗ ಟ್ವೆಂಟಿ-20ಯಾಗಿ ಪರಿವರ್ತನೆಯಾಗಿದೆ. ಕ್ರಿಕೆಟ್‌ಗೆ ಅಗತ್ಯವಿರುವುದು ಎರಡೇ ಪ್ರಕಾರದ ಆಟಗಳು. ಪಂದ್ಯಗಳನ್ನು ನಿಗದಿಪಡಿಸುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದ್ದು, ಇದಕ್ಕೆ ಬಹುಕಾಲ ಬೇಕಾಗಬಹುದು ಎಂದು ಪತ್ರಿಕೆಯೊಂದಕ್ಕೆ ಬರೆದಿರುವ ತನ್ನ ಅಂಕಣದಲ್ಲಿ ತಿಳಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯ ಜಯಭೇರಿ ಬಾರಿಸಿದ ರಾಜಸ್ತಾನ ರಾಯಲ್ಸ್ ತಂಡ ನಾಯಕ ಟ್ವೆಂಟಿ-20ಗೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದು, ಅಂತಾರಾಷ್ಟ್ರೀಯ ವೇಳಾಪಟ್ಟಿಯಲ್ಲಿ ಏಕದಿನಕ್ಕೆ ಜಾಗವನ್ನೇ ನೀಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಆಶಸ್ ಸರಣಿಯ ನಂತರ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಏಳು ಏಕದಿನ ಪಂದ್ಯಗಳ ಸರಣಿಯನ್ನು ಆಡುತ್ತಿರುವುದಕ್ಕೂ ಅವರು ಟೀಕೆ ವ್ಯಕ್ತಪಡಿಸಿದ್ದಾರೆ.

ದುರದೃಷ್ಟಕರವೆಂದರೆ ನವೆಂಬರ್‌ನಲ್ಲಿ ನಡೆಯಲಿರುವ ಬ್ರಿಸ್ಬೇನ್ ಟೆಸ್ಟ್‌ಗೂ ಮೊದಲು ಆಸ್ಟ್ರೇಲಿಯಾವು ಹಾಸ್ಯಾಸ್ಪದ ನಿಗದಿತ ಓವರುಗಳ ಪಂದ್ಯಗಳನ್ನು ಇಂಗ್ಲೆಂಡ್ ವಿರುದ್ಧ, ನಂತರ ಹಲವು ಏಕದಿನಗಳನ್ನು ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ಧ ಆಡಬೇಕಾಗಿದೆ ಎಂದು ಅವರು ಜರೆದಿದ್ದಾರೆ.

ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಒಂದು ತಂಡದ ವಿರುದ್ಧ ಆಡಿದ ನಂತರ ಅದೇ ತಂಡದ ವಿರುದ್ಧ ಏಳು ಏಕದಿನ ಪಂದ್ಯಗಳನ್ನು ಅಂತಾರಾಷ್ಟ್ರೀಯ ತಂಡವೊಂದು ಆಡುತ್ತಿದೆಯೆಂದರೆ ಅದೊಂದು ಜೋಕು ಎಂದು ತಿಳಿಸಿದರು.

ಮುಂದಿನ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆಶಸ್ ಸರಣಿಯವರೆಗೆ ಈಗಿನಿಂದ ಒಟ್ಟು ಒಂಬತ್ತು ಟೆಸ್ಟ್‌ಗಳು ಮಾತ್ರ ಇವೆ. ಆದರೆ ಅದೇ ಅವಧಿಯಲ್ಲಿ ನಗೆಪಾಟಲಿಗೀಡಾಗುವಷ್ಟು ಏಕದಿನ ಪಂದ್ಯಗಳಿವೆ ಎಂದು ಹಂತ ಹಂತವಾಗಿ ಏಕದಿನ ಪಂದ್ಯವನ್ನು ಅವರು ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ