ಟ್ವೆಂಟಿ-20 ರ‌್ಯಾಂಕಿಂಗ್‌ನಲ್ಲಿ ಭಾರತ ಆರನೇ ಸ್ಥಾನಕ್ಕೆ ಕುಸಿತ

ಸೋಮವಾರ, 31 ಅಕ್ಟೋಬರ್ 2011 (16:42 IST)
PTI


ಇಂಗ್ಲೆಂಡ್ ವಿರುದ್ಧದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಪರಾಜಯ ಕಂಡಿರುವ ಟೀಮ್ ಇಂಡಿಯಾವು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೂತನ ಟ್ವೆಂಟಿ-20 ತಂಡ ರ‌್ಯಾಂಕಿಂಗ್ ಪಟ್ಟಿಯಲ್ಲಿ ಐದರಿಂದ ಆರನೇ ಸ್ಥಾನಕ್ಕೆ ಕುಸಿತವನ್ನು ಅನುಭವಿಸಿದೆ.

ಒಂದು ವೇಳೆ ಈ ಮಹತ್ವದ ಪಂದ್ಯವನ್ನು ಗೆಲ್ಲುತ್ತಿದ್ದಲ್ಲಿ ಭಾರತ ಎರಡನೇ ಸ್ಥಾನಕ್ಕೇರುವ ಸುವರ್ಣವಕಾಶವಿತ್ತು. ಆ ಇಂತಹದೊಂದು ಮಹತ್ತರ ಅವಕಾಶವನ್ನು ಮಿಸ್ ಮಾಡಿರುವ ಮಹೇಂದ್ರ ಸಿಂಗ್ ಧೋನಿ ಬಳಗವೀಗ ಆರು ರೇಟಿಂಗ್ ಪಾಯಿಂಟುಗಳನ್ನು ಕಳೆದುಕೊಳ್ಳುವ ಮೂಲಕ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

ಪ್ರಸ್ತುತ 106 ಅಂಕ ಹೊಂದಿರುವ ಭಾರತ ಆರನೇ ಸ್ಥಾನದಲ್ಲಿದ್ದರೆ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿರುವ ಪ್ರವಾಸಿ ಇಂಗ್ಲೆಂಡ್ ತಂಡವು ನಾಲ್ಕು ರೇಟಿಂಗ್ ಪಾಯಿಂಟುಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ 130 ಅಂಕ ಸಂಪಾದಿಸಿದೆ. ಅತ್ತ ಭಾರತಕ್ಕಿಂತ ಐದು ರೇಟಿಂಗ್ ಅಂಕಗಳ ಮುನ್ನಡೆ ಹೊಂದಿರುವ ಆಸ್ಟ್ರೇಲಿಯಾ 111 ಅಂಕಗಳೊಂದಿಗೆ ಐದನೇ ಸ್ಥಾನ ಆಲಂಕರಿಸಿದೆ.

ಭಾರತದ ವಿರುದ್ಧದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದ ಇಂಗ್ಲೆಂಡ್ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್‌ಸನ್ ಬ್ಯಾಟಿಂಗ್ ವಿಭಾಗದಲ್ಲಿ ಎರಡನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ. ಇಂಗ್ಲೆಂಡ್‌ನವರೇ ಆದ ಇಯಾನ್ ಮೊರ್ಗನ್ ಪ್ರಸ್ತುತ ಪಟ್ಟಿಯನ್ನು ಮುನ್ನಡೆಸುತ್ತಿದ್ದಾರೆ.

ಭಾರತದ ಸುರೇಶ್ ರೈನಾ ಸಹ ಮುಂಬಡ್ತಿ ಪಡೆದು ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಆ ಮೂಲಕ ಶ್ರೀಲಂಕಾ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಕ್ಕೆ ತಳ್ಳಿ ಹಾಕಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಿರುವ ಇಂಗ್ಲೆಂಡ್ ಉಸ್ತುವಾರಿ ನಾಯಕ ಗ್ರೇಮ್ ಸ್ವಾನ್ ನಾಲ್ಕನೇ ಸ್ಥಾನಕ್ಕೆ ಕುಸಿತ ಅನುಭವಿಸಿದ್ದಾರೆ. ಆದರೆ ಸ್ವಾನ್ ಸಹ ಆಟಗಾರ ಟಿಮ್ ಬ್ರೆಸ್ಮನ್ ಐದು ಸ್ಥಾನಗಳ ನೆಗೆತ ಕಂಡು 13ಕ್ಕೆ ತಲುಪಿದ್ದಾರೆ.

PTI


ಐಸಿಸಿ ಟ್ವೆಂಟಿ-20 ತಂಡ ರ‌್ಯಾಂಕಿಂಗ್ ಪಟ್ಟಿ ಇಂತಿದೆ:

1. ಇಂಗ್ಲೆಂಡ್- 130
2. ಶ್ರೀಲಂಕಾ- 126
3. ನ್ಯೂಜಿಲೆಂಡ್- 117
4. ದಕ್ಷಿಣ ಆಫ್ರಿಕಾ- 113
5. ಆಸ್ಟ್ರೇಲಿಯಾ- 111
6. ಭಾರತ- 106
7. ಪಾಕಿಸ್ತಾನ- 97
8. ವೆಸ್ಟ್‌ಇಂಡೀಸ್- 89
9. ಅಪಘಾನಿಸ್ತಾನ- 75
10. ಜಿಂಬಾಬ್ವೆ- 54

ವೆಬ್ದುನಿಯಾವನ್ನು ಓದಿ