ಟ್ವೆಂಟಿ-20 ವಿಶ್ವಕಪ್; ಭಾರತ ನೆಚ್ಚಿನ ತಂಡ: ಸಚಿನ್

ಭಾನುವಾರ, 31 ಮೇ 2009 (13:17 IST)
ಇಂಗ್ಲೆಂಡ್‌ನಲ್ಲಿ ಜೂನ್ 5ರಿಂದ ಆರಂಭವಾಗಲಿರುವ ದ್ವಿತೀಯ ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಭಾರತ ತಂಡ ತನ್ನ ಬಳಿಯಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ಭಾರತ ತಂಡದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

PTIPTI
ಉತ್ತಮ ಸಮತೋಲನದಿಂದ ಕೂಡಿದ ಭಾರತ ತಂಡವು ಆಳವಾದ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿರುವುದಲ್ಲದೇ ಅತ್ಯಂತ ಪ್ರಭಾವಿಶಾಲಿ ಬೌಲಿಂಗ್ ದಾಳಿಯನ್ನು ಕೂಡಾ ಹೊಂದಿದೆ. ಇದು ಭಾರತವನ್ನು ಮತ್ತೆ ಚಾಂಪಿಯನ್ ಪಟ್ಟಕ್ಕೇರಿಸುವುದರಲ್ಲಿ ಸಹಾಯಕರವಾಗಿ ಪರಿಣಮಿಸಲಿದೆ ಎಂದು ಅವರು ವಿವರಿಸಿದರು.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟ್ವೆಂಟಿ-20 ಚಾಂಪಿಯನ್‌ಷಿಪ್‌ನಲ್ಲಿ ಸರ್ವಾಂಗೀಣ ಪ್ರದರ್ಶನದೊಂದಿಗೆ ಕಿರೀಟ ಮುಡಿಗೇರಿಸಿದ ಭಾರತ ತಂಡ ಇಲ್ಲಿಯ‌ೂ ಅಂತಹುದೇ ಆಟದೊಂದಿಗೆ ಪ್ರಶಸ್ತಿಯನ್ನು ಉಳಿಸಿಕೊಳ್ಳಲಿದೆ ಎಂದು ಅವರು ಹೇಳಿದರು.

ವಿಶ್ವ ದರ್ಜೆಯ ಯುವ ಆಟಗಾರರನ್ನು ಹೊಂದಿರುವ ಭಾರತೀಯ ತಂಡ ಇತರ ತಂಡಗಳಿಗೆ ಹೋಲಿಸಿದಾಗ ಹೆಚ್ಚು ಸಮತೋಲನದಿಂದ ಕೂಡಿದ್ದು, ಅಲ್ಲದೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರ ಹೊಮ್ಮಿದೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.

ಅದೇ ವೇಳೆ ಓಪನರ್ ವಿರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರ ಐಪಿಎಲ್ ಟೂರ್ನಿಯಲ್ಲಿನ ಕಳಪೆ ಫಾರ್ಮ್ ಬಗ್ಗೆ ಕೆಳಲಾದ ಪ್ರಶ್ನೆಗೆ ಉತ್ತರಸಿದ ಸಚಿನ್ "ಯಾವನೇ ಆಟಗಾರನು ಎಲ್ಲಾ ಟೂರ್ನಿಗಳಲ್ಲಿಯೂ ಸತತ ಫಾರ್ಮ್ ಉಳಿಸಿಕೊಳ್ಳುವಲ್ಲಿ ಪೂರ್ಣ ಸಫಲತೆಯನ್ನು ಕಾಣುವುದಿಲ್ಲ. ಆದರೆ ಅಂತಹ ವಿಶ್ವ ದರ್ಜೆಯ ಆಟಗಾರರು ಧಿಢೀರನೆ ಪುಟಿದೇಳುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಎದುರಾಳಿ ತಂಡಕ್ಕೆ ಮಾರಕವಾಗಿ ಪರಿಣಮಿಸಲಿದೆ" ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಟ್ವೆಂಟಿ-20 ಕ್ರಿಕೆಟ್‌‌ನ್ನು ಸಮರ್ಥಿಸಿಕೊಂಡ ಸಚಿನ್ ಇದರಿಂದಾಗಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನ ಬಗೆಗಿನ ಪ್ರೇಕ್ಷಕರ ಆಸಕ್ತಿಯೂ ಹೆಚ್ಚಾಗಲಿದೆ ಎಂದು ಹೇಳಿದರು.