ಡಿಕ್ಲೇರ್ ವಿಳಂಬ ತಂಡದ ನಿರ್ಧಾರ: ಧೋನಿ

ಮಂಗಳವಾರ, 23 ಡಿಸೆಂಬರ್ 2008 (19:39 IST)
ಯಾವ ಕಾರಣಕ್ಕಾಗಿ ಡಿಕ್ಲೇರ್ ಘೋಷಿಸಲು ವಿಳಂಬ ನೀತಿ ಅನುಸರಿಸಲಾಯಿತು ಎಂಬುದಕ್ಕೆ ಉತ್ತರಿಸಿರುವ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಶತಕ ದಾಖಲಿಸುವ ಸಾಧ್ಯತೆಯಿದ್ದುದರಿಂದ ಅವಕಾಶ ಮಾಡಿಕೊಡಲಾಯಿತು ಮತ್ತು ಅದು ತಂಡದ ನಿರ್ಧಾರ ಎಂದು ಹೇಳಿದ್ದಾರೆ.

"ಗಂಭೀರ್ ಮತ್ತು ಯುವರಾಜ್ ಶತಕ ಗಳಿಸುವ ಸಾಧ್ಯತೆಗಳಿದ್ದುವು. ದುರದೃಷ್ಟವಶಾತ್ ಅವರಿಗದನ್ನು ನೆರವೇರಿಸಲು ಅಸಾಧ್ಯವಾಯಿತು" ಎಂದು ಪಂದ್ಯ ಮುಗಿದ ನಂತರ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ.

"ನಿನ್ನೆ ನಮಗೆ ಮಂಜಿನ ಬಗ್ಗೆ ಯಾವುದೇ ಕಲ್ಪನೆಗಳಿರಲಿಲ್ಲ ಮತ್ತು ಯಾವುದನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿರಲಿಲ್ಲ. ಆದರೆ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿದ್ದರೆ ನಮಗೆ ಇಂದು ಹಿನ್ನಡೆಯಾಗುತ್ತಿತ್ತು. ನಾವಿಂದು ಉತ್ತಮ ಆರಂಭವನ್ನೇ ಮಾಡಿದ್ದೇವೆ. ಯುವಿ ಮತ್ತು ಗಂಭೀರ್‌ರಿಗೆ ಶತಕ ಪೂರೈಸಲು ಅವಕಾಶ ಕೊಟ್ಟು ನಂತರ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರ ತಂಡದ್ದು" ಎಂದು ತಿಳಿಸಿದರು.

ಭಾರತವು ಇಂದು ಕೊನೆಗೊಂಡ ಮೊಹಾಲಿ ಟೆಸ್ಟ್‌ನ್ನು ಡ್ರಾ ಮಾಡಿಕೊಂಡಿದ್ದು, ಮೊದಲ ಟೆಸ್ಟನ್ನು ಚೆನ್ನೈಯಲ್ಲಿ ಭಾರೀ ಅಂತರದಿಂದ ಗೆದ್ದುಕೊಂಡಿತ್ತು. ಆ ಮ‌ೂಲಕ ಸರಣಿಯನ್ನು 1-0 ಅಂತರದಿಂದ ತನ್ನ ಬಗಲಿಗೆ ಹಾಕಿಕೊಂಡಿದೆ.

"ಪಂದ್ಯದ ಎಲ್ಲಾ ಯಶಸ್ಸು ಬೌಲರುಗಳಿಗೆ ಅದರಲ್ಲೂ ವೇಗಿಗಳಿಗೆ ಸಲ್ಲಬೇಕಾಗಿದೆ. ಯಾವಾಗ ಅಗತ್ಯವಿತ್ತೋ ಆವಾಗ ಅವರು ವಿಕೆಟ್ ಕಿತ್ತಿದ್ದಾರೆ. ಅದೇ ಹೊತ್ತಿಗೆ ದಾಂಡಿಗರು ಕೂಡ ಉತ್ತಮ ರನ್ ಪೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತಮ ಭಾಗೀದಾರಿಕೆಯೂ ಕಂಡು ಬಂದಿದೆ" ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ವೆಬ್ದುನಿಯಾವನ್ನು ಓದಿ