ತೆಂಡೂಲ್ಕರ್ 67 ನಾಟೌಟ್; ವಿಂಡೀಸ್‌ಗೆ ಭಾರತದ ದಿಟ್ಟ ಉತ್ತರ

ಗುರುವಾರ, 24 ನವೆಂಬರ್ 2011 (17:02 IST)
PTI


ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (67*), ರಾಹುಲ್ ದ್ರಾವಿಡ್ (82) ಮತ್ತು ಗೌತಮ್ ಗಂಭೀರ್ (55) ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ಇಂಡೀಸ್‌ ತಂಡದ ಮೊದಲ ಇನ್ನಿಂಗ್ಸ್‌ನ ಮೊತ್ತವಾದ 590 ರನ್ನುಗಳಿಗೆ ದಿಟ್ಟ ಉತ್ತರವನ್ನೇ ನೀಡಿರುವ ಆತಿಥೇಯ ಭಾರತ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 80 ಓವರುಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 281 ರನ್ ಪೇರಿಸಿದೆ.

ಇದೀಗ ಏಳು ವಿಕೆಟ್ ಬಾಕಿ ಉಳಿದಿರುವಂತೆಯೇ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 309 ರನ್ನುಗಳ ಹಿನ್ನಡೆ ಅನುಭವಿಸುತ್ತಿದ್ದು, ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 109 ರನ್ ಗಳಿಸಬೇಕಾದ ಅಗತ್ಯವಿದೆ.

PTI


ಸಚಿನ್ ಮಹಾಶತಕದ ನಿರೀಕ್ಷೆ....
ಅಂದ ಹಾಗೆ ವಿಶ್ವದೆಲ್ಲೆಡೆಯ ಕ್ರೀಡಾಭಿಮಾನಿಗಳು ಸಚಿನ್ ಮಹಾಶತಕದ ನಿರೀಕ್ಷೆಯಲ್ಲಿದ್ದು, ಶುಕ್ರವಾರವೇ ಈ ಐತಿಹಾಸಿಕ ಸಾಧನೆ ಬರೆಯಲಿದ್ದಾರೆಂದು ನಂಬಿಕೊಂಡಿದ್ದಾರೆ.

ಈಗಾಗಲೇ ವಿಂಡೀಸ್ ಬೌಲರುಗಳನ್ನು ದಿಟ್ಟವಾಗಿ ಎದುರಿಸಿರುವ ಸಚಿನ್ 133 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಐದುಬೌಂಡರಿ ನೆರವಿನಿಂದ 67 ರನ್ ಗಳಿಸಿದ್ದು, ಶತಕದತ್ತ ದಾಪುಗಾಲನ್ನಿಟ್ಟಿದ್ದಾರೆ.

ಕಲಾತ್ಮಕ ವಿವಿಎಸ್ ಲಕ್ಷ್ಮಣ್ ಜತೆ ಸೇರಿಕೊಂಡಿರುವ ಸಚಿನ್ ನಾಲ್ಕನೇ ವಿಕೆಟ್‌ಗೆ ಮುರಿಯದ 57 ರನ್ ಪೇರಿಸಿದ್ದು, ವಿಂಡೀಸ್‌ ಬೌಲರುಗಳನ್ನು ಕಾಡುತ್ತಿದ್ದಾರೆ. ಲಿಟ್ಲ್ ಮಾಸ್ಟರ್‌ಗೆ ಉತ್ತಮ ಸಾಥ್ ನೀಡುತ್ತಿರುವ ಲಕ್ಷ್ಮಣ್ 32 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

PTI


ದ್ರಾವಿಡ್‌ ಮೈಲುಗಲ್ಲು...
ಇದಕ್ಕೂ ಮೊದಲು ಆಕರ್ಷಕ ಅರ್ಧಶತಕ ಬಾರಿಸಿದ್ದ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 13 ಸಾವಿರ ರನ್ನುಗಳ ಸಾಧನೆ ಮಾಡಿದರು. ಆದರೆ 82 ರನ್ನುಗಳಿಗೆ ವಿಕೆಟ್ ಒಪ್ಪಿಸಿದ 'ವಾಲ್' ಮತ್ತೊಂದು ಶತಕದಿಂದ ವಂಚಿತರಾದರು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 13 ಸಾವಿರ ರನ್ ಗಳಿಸಿದ್ದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿರುವ ದ್ರಾವಿಡ್ ಪ್ರಸಕ್ತ ಸಾಲಿನಲ್ಲಿ ರನ್ ಗಳಿಕೆಯ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ.

PTI


ಗಂಭೀರ್ ಫಿಫ್ಟಿ...ಸೆಹ್ವಾಗ್ ಬಿರುಸಿನ ಆರಂಭ...
ಈ ಮೊದಲು ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ತಂಡಕ್ಕೆ ಉತ್ತಮ ಆರಂಭವೊದಗಿಸಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 67 ರನ್ನುಗಳ ಜತೆಯಾಟ ನೀಡಿದ್ದರು.

ಆಕರ್ಷಕ ಅರ್ಧಶತಕ ಬಾರಿಸಿದ ಗಂಭೀರ್ (55 ರನ್, 9 ಬೌಂಡರಿ) ಭಾರತಕ್ಕೆ ಚೇತರಿಕೆಯ ಆರಂಭವೊದಿಸಲು ನೆರವಾದರು. ಹಾಗೆಯೇ ವೀರೇಂದ್ರ ಸೆಹ್ವಾ ಗ್ ಬಿರುಸಿನ 37 ರನ್ ಗಳಿಸಿದರು. ಸೆಹ್ವಾಗ್ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

ಅಶ್ವಿನ್‌ಗೆ ಐದರ ಗೊಂಚಲು; ವಿಂಡೀಸ್ 590ಕ್ಕೆ ಸರ್ವಪತನ...
PTI
ನಿನ್ನೆಯ ಮೊತ್ತ 575/5 ಎಂಬಲ್ಲಿದ್ದ ಬ್ಯಾಟಿಂಗ್ ಮುಂದುರಿಸಿದ್ದ ವಿಂಡೀಸ್ ತಂಡವು 590 ರನ್ನುಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಮಹೇಂದ್ರ ಸಿಂಗ್ ಧೋನಿ ಬಳಗಕ್ಕೆ ಕಠಿಣ ಸವಾಲನ್ನು ಒಡ್ಡಿತ್ತು.

ಭಾರತದ ಪರ ಸರಣಿಯಲ್ಲಿ ಮತ್ತೊಂದು ಐದು ವಿಕೆಟುಗಳ ಸಾಧನೆ ಮಾಡಿದ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಪ್ರಭಾವಿ ಎನಿಸಿಕೊಂಡರು.

ಎರಡನೇ ದಿನದಾಟದಲ್ಲಿ ಡ್ಯಾರೆನ್ ಬ್ರಾವೋ ಬಾರಿಸಿದ ಆಕರ್ಷಕ ಶತಕದ (166) ನೆರವಿನಿಂದ ಕೆರೆಬಿಯನ್ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 575 ರನ್ನುಗಳ ಬೃಹತ್ ಮೊತ್ತ ಪೇರಿಸಲು ನೆರವಾಗಿತ್ತು. ಆದರೆ ಅದೇ ಮೊತ್ತಕ್ಕೆ ಡಿಕ್ಲೇರ್ ಮಾಡಿಕೊಳ್ಳಲು ಮನಸ್ಸು ಮಾಡದ ವಿಂಡೀಸ್ ತಂಡವು ಮೂರನೇ ದಿನದಾಟದಲ್ಲೂ ಬ್ಯಾಟಿಂಗ್ ಮುಂದುವರಿಸಿತ್ತು.

ವೆಬ್ದುನಿಯಾವನ್ನು ಓದಿ