ದಾಖಲೆ ಗೆಲುವು ಸಾಧಿಸಿದ ಕಿವಿಸ್

ಸೋಮವಾರ, 31 ಡಿಸೆಂಬರ್ 2007 (13:04 IST)
ವರುಷದ ಕೊನೆಯ ದಿನ ಕಿವಿಸ್ ನಾಯಕ ಡೆನಿಯಲ್ ವೆಟ್ಟೊರಿ ಪಾಲಿಗೆ ಅವಿಸ್ಮರಣೀಯ ದಿನ. ಮೊದಲನೆಯದಾಗಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಮತ್ತು ನಾಯಕನಾಗಿ ಮೊದಲ ಸರಣಿ ಗೆಲುವು ದಕ್ಕಿತು.

ಬಾಂಗ್ಲಾ ವಿರುದ್ದ ನಡೆದೆ ಸರಣಿಯ ಅಂತಿಮ ಪಂದ್ಯದಲ್ಲಿ ಡೆನಿಯಲ್ ವೆಟ್ಟೊರಿ ಐದು ವಿಕೆಟ್ ಪಡೆದರೆ. ಕಿವಿಸ್ ಬ್ಯಾಟ್ಸ್‌ಮನ್‌ ಬ್ರೆಂಡನ್ ಮ್ಯಾಕಲ್ಲಮ್ 29 ಎಸೆತಗಳಲ್ಲಿ 80 ರನ್ ಚಚ್ಚುವ ಮೂಲಕ ಪಂದ್ಯವನ್ನು ಆರೇ ಓವರುಗಳಲ್ಲಿ ಮುಕ್ತಾಯಗೊಳಿಸಿದರು.

ದುರ್ಬಲ ಬಾಂಗ್ಲಾದೇಶ ತಂಡವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಕಿವಿಸ್ ವರ್ಷದ ಮೊದಲ ದಿನವನ್ನು ಹರುಷದಿಂದಲೇ ಪ್ರಾರಂಭಿಸಲಿದೆ. ವಿಚಿತ್ರ ಎಂದರೆ ಪಂದ್ಯ ಪ್ರಾರಂಭಕ್ಕೆ ಬಾಂಗ್ಲಾ ನಾಯಕ ಮಹ್ಮದ್ ಅಶ್ರಫುಲ್ ಅವರು ಅನಿರೀಕ್ಷಿತ ಆಟವನ್ನು ಅಂತಿಮ ಪಂದ್ಯದಲ್ಲಿ ಪ್ರದರ್ಶಿಸುವಂತೆ ತಂಡದ ಆಟಗಾರರಿಗೆ ಕರೆ ನೀಡಿದ್ದರು. ಅಶ್ರಫುಲ್ ಕರೆ ಮಾತ್ರ ಅರಣ್ಯರೋಧನವಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡದವರು ಕಷ್ಟಪಟ್ಟು 38 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 93 ರನ್ ಮಾಡಿದರೆ, ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿದ ಕಿವಿಸ್ ತಂಡವು ವಿಕೆಟ್ ನಷ್ಟವಿಲ್ಲದೇ ಆರು ಓವರುಗಳಲ್ಲಿ 95 ರನ್‌ಗಳಿಸಿ ಬಾಂಗ್ಲಾದ ಮೇಲೆ ಸೋಲಿನ ಬರೆ ಎಳೆದರು.

28 ಎಸೆತಗಳನ್ನು ಎದುರಿಸಿದ ಬ್ರೆಂಡನ್ ಮ್ಯಾಕಲ್ಲಮ್ 9 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ನೆರವಿನಿಂದ 80 ರನ್ ಮಾಡಿ ದಾಖಲೆ ಬರೆದರು. ವಿಶ್ವ ಕ್ರಿಕೆಟಿನಲ್ಲಿ ಆರು ಓವರುಗಳಲ್ಲಿ ಪಂದ್ಯ ಗೆದ್ದ ಗೌರವಕ್ಕೆ ಕಿವಿಸ್ ಪಾತ್ರವಾಯಿತು. ಡೆನಿಯಲ್ ವೆಟ್ಟೊರಿ ಆರು ಓವರುಗಳಲ್ಲಿ ಕೇವಲ ಏಳು ರನ್ ನೀಡಿ ಐದು ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ