ದ್ರಾವಿಡ್ ಶತಕ ಸಾಧನೆ; ಬ್ರಾಡ್ ಹ್ಯಾಟ್ರಿಕ್ ಮ್ಯಾಜಿಕ್

ಭಾನುವಾರ, 31 ಜುಲೈ 2011 (11:03 IST)
PTI
'ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಬಾರಿಸಿದ ಆಕರ್ಷಕ ಶತಕದ ಹೊರತಾಗಿಯೂ 'ಹ್ಯಾಟ್ರಿಕ್' ವಿಕೆಟ್ ಸಾಧನೆ ಮಾಡಿರುವ ಸ್ಟುವರ್ಟ್ ಬ್ರಾಡ್ ಮಾರಕ ದಾಳಿಗೆ ಕುಸಿತ ಕಂಡಿರುವ ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸನ್ನು 288 ರನ್ನುಗಳಿಗೆ ಕೊನೆಗೊಳಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 67 ರನ್ನುಗಳ ಮಹತ್ವದ ಮುನ್ನಡೆ ದಾಖಲಿಸಿದೆ.

ಆನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಎರಡನೇ ದಿನದಂತ್ಯಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 11 ಓವರುಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದ್ದು, 43 ರನ್ನುಗಳ ಹಿನ್ನಡೆ ಅನುಭವಿಸುತ್ತಿದೆ.

ತಮ್ಮ 34ನೇ ಟೆಸ್ಟ್ ಶತಕ ದಾಖಲಿಸುವ ಮೂಲಕ ತಂಡವನ್ನು ಸುಸ್ಥಿತಿಗೆ ತಲುಪಿಸಿದ್ದ ದ್ರಾವಿಡ್ ನೆರವಿನಿಂದ ಭಾರತವು ಗೌರವಾನ್ವಿತ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಆ ಮೂಲಕ ಸುನಿಲ್ ಗಾವಸ್ಕರ್ ದಾಖಲೆಯನ್ನು ದ್ರಾವಿಡ್ ಸರಿಗಟ್ಟಿದರು. ಆರಂಭಿಕನಾಗಿ ಕಣಕ್ಕಿಳಿಯುವ ಮೂಲಕ 235 ಎಸೆತಗಳನ್ನು ಸಮರ್ಥವಾಗಿ ಎದುರಿಸಿದ ದ್ರಾವಿಡ್ ಒಂಬತ್ತು ಬೌಂಡರಿಗಳ ನೆರವಿನಿಂದ 117 ರನ್ ಗಳಿಸಿದರು.

ಆದರೆ ಸ್ಟುವರ್ಟ್ ಬ್ರಾಡ್ ಮಾರಕ ದಾಳಿಗೆ (46ಕ್ಕೆ 6) ಸಿಲುಕಿದ್ದ ಭಾರತವು ತನ್ನ ಕೊನೆಯ ಆರು ವಿಕೆಟುಗಳನ್ನು 22 ರನ್ನುಗಳಿಗೆ ಕಳೆದುಕೊಳ್ಳುವ ಮೂಲಕ ಹಿನ್ನಡೆ ಅನುಭವಿಸಿತ್ತು. ಒಂದು ಹಂತದಲ್ಲಿ 267/4 ಎಂಬಲ್ಲಿದ್ದ ಭಾರತ ತಂಡವು ನಾಟಕೀಯ ಕುಸಿತ ಕಾಣುವ ಮೂಲಕ 288 ರನ್ನುಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತ್ತು.

ಈ ಮೊದಲು ದ್ರಾವಿಡ್‌ಗೆ ಉತ್ತಮ ಸಾಥ್ ನೀಡಿದ್ದ ವಿವಿಎಸ್ ಲಕ್ಷ್ಮಣ್ (54) ಮತ್ತು ಯುವರಾಜ್ ಸಿಂಗ್ (62) ಅರ್ಧಶತಕಗಳ ಸಾಧನೆ ಮಾಡಿದರು. ಆದರೆ ತಮ್ಮ 100ನೇ ಶತಕ ಸಾಧನೆ ಎದುರು ನೋಡುತ್ತಿದ್ದ ಸಚಿನ್ ತೆಂಡೂಲ್ಕರ್ (16) ನಿರಾಸೆ ಮೂಡಿಸಿದರು.

ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡವು ಆರಂಭಿಕ ಆಲಿಸ್ಟಾರ್ ಕುಕ್ (5) ವಿಕೆಟನ್ನು ಕಳೆದುಕೊಂಡಿದ್ದು, ನಾಯಕ ಆಂಡ್ರ್ಯೂ ಸ್ಟ್ರಾಸ್ (6*) ಮತ್ತು ಇಯಾನ್ ಬೆಲ್ (9*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕುಕ್ ವಿಕೆಟ್ ಪಡೆದ ಇಶಾಂತ್ ಶರ್ಮಾ ಭಾರತಕ್ಕೆ ಮೊದಲ ಮುನ್ನಡೆ ಒದಗಿಸಿದರು.

ಮೊದಲ ಲಾರ್ಡ್ಸ್ ಪಂದ್ಯವನ್ನು ಕಳೆದುಕೊಂಡಿದ್ದ ಭಾರತ ಇದೀಗ ಟ್ರಿಂಟ್ ಬ್ರಿಡ್ಜ್‌ ಪಂದ್ಯವನ್ನು ಗೆಲ್ಲುವ ಮೂಲಕ ತಿರುಗೇಟು ನೀಡಲು ಸಜ್ಜಾಗಿದೆ. ಆದರೆ ಮೊದಲೆರಡು ದಿನಗಳ ಆಟವು ಸಮಬಲದಲ್ಲಿ ಸಾಗಿದೆ.

ವೆಬ್ದುನಿಯಾವನ್ನು ಓದಿ