ಧೋನಿಗೆ ಜೀವ ಬೆದರಿಕೆ: ಭದ್ರತೆ 'ಝೆಡ್' ದರ್ಜೆಗೆ

ಶನಿವಾರ, 3 ಜನವರಿ 2009 (19:53 IST)
50 ಲಕ್ಷ ರೂಪಾಯಿಗಳನ್ನು ಕೊಡದಿದ್ದಲ್ಲಿ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿಯವರ ಜೀವಕ್ಕೆ ಅಪಾಯವನ್ನುಂಟು ಮಾಡುವುದಾಗಿ ಜೀವ ಬೆದರಿಕೆ ಪತ್ರವೊಂದು ಬಂದ ಹಿನ್ನಲೆಯಲ್ಲಿ ಜಾರ್ಖಂಡ್ ಸರಕಾರ ಕ್ರಿಕೆಟಿಗನಿಗೆ 'ಝೆಡ್' ದರ್ಜೆಯ ಭದ್ರತೆಯನ್ನು ಒದಗಿಸಿದೆ. ಧೋನಿ ಕುಟುಂಬಕ್ಕೆ ಸೋಮವಾರ ಈ ಪತ್ರ ತಲುಪಿದ್ದು ಇದೀಗ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

"ಧೋನಿಯವರಿಗೆ 'ಝೆಡ್' ದರ್ಜೆಯ ಭದ್ರತೆಯನ್ನು ಒದಗಿಸಲಾಗಿದೆ" ಎಂದು ಉನ್ನತ ಪೊಲೀಸ್ ಮ‌ೂಲಗಳು ತಿಳಿಸಿವೆ. ಈ ಹಿಂದೆ ಧೋನಿಯವರಿಗೆ 'ವೈ' ದರ್ಜೆಯ ಭದ್ರತೆಯನ್ನು ನೀಡಲಾಗಿತ್ತು. ಇದೀಗ ಈ ಕ್ರಿಕೆಟಿಗನಿಗೆ ನೀಡಲಾಗಿರುವ 'ಝೆಡ್' ದರ್ಜೆಯ ಭದ್ರತಾ ವ್ಯವಸ್ಥೆಯಲ್ಲಿ 45 ಮಂದಿ ಭದ್ರತಾ ಸಿಬಂದಿಗಳಿದ್ದು, ದೇಶದ ಎರಡನೇ ಅತೀ ದೊಡ್ಡ ಭದ್ರತಾ ವ್ಯವಸ್ಥೆಯಾಗಿದೆ.

ಧೋನಿ ಕುಟುಂಬಕ್ಕೆ ಅನಾಮಿಕ ಬೆದರಿಕೆ ಪತ್ರವೊಂದನ್ನು ಸೋಮವಾರ ತಲುಪಿದ್ದು, ಭೂಗತ ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಸಹಚರ ಎನ್ನಲಾಗುವ ತಸ್ಲೀಮ್ ಇದರ ರೂವಾರಿ ಎಂಬ ಸಂಶಯಗಳಿವೆ. ಈ ಪತ್ರದಲ್ಲಿ 50 ಲಕ್ಷ ರೂಪಾಯಿ ಬೇಡಿಕೆಯನ್ನು ಮುಂದಿಡಲಾಗಿದ್ದು, ಒಂದು ವೇಳೆ ಪೂರೈಸದಿದ್ದರೆ ಧೋನಿಯವರಿಗೆ ತೊಂದರೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ಕೂಡ ನೀಡಲಾಗಿದೆ ಎಂದು ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.

ಧೋನಿಯ ಮನೆಯವರು ಈ ಬೆದರಿಕೆ ಪತ್ರವನ್ನು ಮಂಗಳವಾರ ರಾತ್ರಿ ಪೊಲೀಸರಿಗೆ ಹಸ್ತಾಂತರಿದ ನಂತರ ಅವರಿಗೆ ನೀಡಲಾಗಿದ್ದ ಭದ್ರತಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಅದೇ ಹೊತ್ತಿಗೆ ತನಿಖೆ ಕೂಡ ಪ್ರಾರಂಭವಾಗಿದ್ದು, ಬೆದರಿಕೆ ಪತ್ರವನ್ನು ಕಳುಹಿಸಿದವರು ಯಾರು ಎಂಬ ತಲಾಶೆ ನಡೆಯುತ್ತಿದೆ.

ಇತ್ತೀಚೆಗಷ್ಟೇ ಮುಕ್ತಾಯ ಕಂಡಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗುವ ಮೊದಲು ಧೋನಿ ಭದ್ರತಾ ಸಿಬಂದಿಗಳೊಂದಿಗಿನ ಅಸಮಾಧಾನದಿಂದ ಏಕಾಂಗಿಯಾಗಿ ವಿಮಾನ ನಿಲ್ದಾಣಕ್ಕೆ ಹೊರಟು ಹೋಗಿದ್ದರು ಎಂದು ವರದಿಯಾಗಿತ್ತು. ಇದಕ್ಕೂ ಮೊದಲು ಧೋನಿ ನಿಷೇಧಿತ ಶಸ್ತ್ರ ಹೊಂದಲು ಅನುಮತಿ ನೀಡಬೇಕೆಂದು ಸರಕಾರವನ್ನು ಕೋರಿದ್ದರು. ಸಾಮಾನ್ಯ ಗನ್ ಲೈಸೆನ್ಸ್ ಧೋನಿ ಬಳಿ ಈಗಾಗಲೇ ಇದ್ದು, ನಿಷೇಧಿತ ಶಸ್ತ್ರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರದಿಂದ ಅನುಮತಿ ದೊರೆತ ನಂತರ 9 ಎಂ.ಎಂ. ಪಿಸ್ತೂಲ್ ತೆಗೆದುಕೊಳ್ಳಬೇಕೆಂದು ಯೋಜನೆಯಿತ್ತು ಎಂದು ಕುಟುಂಬದ ಮ‌ೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ