ಧೋನಿಗೆ ದೇವಸ್ಥಾನ ಇಲ್ಲ; ಪ್ರತಿಮೆ ಮಾತ್ರ

ಶನಿವಾರ, 3 ಜನವರಿ 2009 (19:21 IST)
ಮಹೇಂದ್ರ ಸಿಂಗ್ ಧೋನಿಯವರ ಕುಟುಂಬದವರಿಂದ ಆಕ್ಷೇಪಗಳು ಬಂದ ಕಾರಣ ದೇವಸ್ಥಾನ ಕಟ್ಟುವ ನಿರ್ಧಾರವನ್ನು ಅವರ ಅಭಿಮಾನಿಗಳು ಕೈ ಬಿಟ್ಟಿದ್ದಾರೆ. ಅದರ ಬದಲಿಗೆ ಧೋನಿಯ ಪ್ರತಿಮೆಯನ್ನು ಆರ್ಟ್ ಗ್ಯಾಲರಿಯಲ್ಲಿಡಲಿದ್ದಾರೆ ಎಂದು ತಿಳಿದು ಬಂದಿದೆ.

"ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಧೋನಿಯವರ ಹೆತ್ತವರಿಂದ ಅನುಮತಿ ಪಡೆದುಕೊಳ್ಳಬೇಕಿತ್ತು. ಇದೆಲ್ಲ ಕೀಳುಮಟ್ಟದ ಪ್ರಚಾರವೆನಿಸಿಕೊಳ್ಳುತ್ತದೆ" ಎಂದು ರಾಂಚಿಯ ಉಪ ಮೇಯರ್ ಅಜಯ್ ನಾಥ್ ಸಹದೇವ್ ಪತ್ರಕರ್ತರ ಜತೆ ಮಾತನಾಡುತ್ತಾ ಅಭಿಪ್ರಾಯ ಪಟ್ಟಿದ್ದಾರೆ. ಅವರು ಧೋನಿಯವರ ಆಪ್ತರಲ್ಲಿ ಒಬ್ಬರು ಎನ್ನಲಾಗಿದೆ.

ರಾಂಚಿ ಬಳಿಯ ಹಾಟಿಯಾ ಎಂಬಲ್ಲಿ ಧೋನಿ ದೇವಸ್ಥಾನ ಕಟ್ಟಲು ಯೋಜನೆ ಸಿದ್ಧಪಡಿಸುತ್ತಿರುವುದಾಗಿ 'ಧೋನಿ ಅಭಿಮಾನಿಗಳ ಸಂಘ' ಡಿಸೆಂಬರ್ 20ರಂದು ಹೇಳಿತ್ತು. ಅಮಿತಾಬ್ ಬಚ್ಚನ್, ಶಾರೂಖ್ ಖಾನ್‌ರಿಗೆ ಲಂಡನ್‌ನ ಮ್ಯೂಜಿಯಂನಲ್ಲಿ ಮ‌ೂರ್ತಿ ಇಡಬಹುದಾದರೆ ನಾವ್ಯಾಕೆ ನಮ್ಮ ಅಭಿಮಾನವನ್ನು ದೇವಸ್ಥಾನ ಕಟ್ಟುವ ಮ‌ೂಲಕ ತೋರಿಸಬಾರದು ಎಂಬುದು ಅಭಿಮಾನಿಗಳ ಸಂಘದ ಪ್ರಶ್ನೆಯಾಗಿತ್ತು. ಆದರೆ ಇದಕ್ಕೆ ಧೋನಿ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ದೇವಸ್ಥಾನ ಕಟ್ಟುವ ಯೋಚನೆಯನ್ನು ಕೈಬಿಡಲಾಗಿದೆ ಎಂದು ಸಂಘ ತಿಳಿಸಿದೆ.

"ಧೋನಿಯವರಷ್ಟೇ ಗಾತ್ರದ ಪುತ್ತಳಿಯೊಂದನ್ನು ಸ್ಥಾಪಿಸಿ, ಆರ್ಟ್ ಗ್ಯಾಲರಿಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೇವೆ. ಈ ಗ್ಯಾಲರಿಯಲ್ಲಿ ಧೋನಿಯವರ ಬಾಲ್ಯಾವಸ್ಥೆಯಿಂದ ಹಿಡಿದು ಇತ್ತೀಚಿನ ಅವರ ಜೀವನ ಶೈಲಿಯನ್ನು ಬಿಂಬಿಸುವ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುವುದು. ನಾವು ಯಾರ ಭಾವನೆಗಳಿಗೂ ನೋವುಂಟು ಮಾಡಲು ಬಯಸುವುದಿಲ್ಲ" ಎಂದು ಧೋನಿ ಅಭಿಮಾನಿಗಳ ಸಂಘದ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಮುಂದಿನ ವರ್ಷದ ಆಗಸ್ಟ್ 15ರಿಂದ ಪ್ರವಾಸಿಗಳಿಗೆ ಈ ಗ್ಯಾಲರಿಯನ್ನು ವೀಕ್ಷಣೆಗೆ ಒದಗಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ