ಧೋನಿ ಮನೆ ಸ್ಫೋಟಿಸುವ ಎರಡನೇ ಬೆದರಿಕೆ

ಶನಿವಾರ, 3 ಜನವರಿ 2009 (19:55 IST)
ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿಯವರ ರಾಂಚಿಯಲ್ಲಿನ ಮನೆಯನ್ನು ಸ್ಫೋಟಿಸುವುದಾಗಿ ಎರಡನೇ ಬೆದರಿಕೆ ಪತ್ರ ಬಂದ ಬಗ್ಗೆ ವರದಿಯಾಗಿದೆ. ಡಿ-ಕಂಪನಿಯ ಮುಂಬೈ ಮ‌ೂಲದ ಶೂಟರ್ ತಸ್ಲೀಮ್ ಎಂಬಾತ ಇದರ ರೂವಾರಿ ಎಂದು ಪೊಲೀಸರು ಶಂಕಿಸಿದ್ದಾರೆ. ಜತೆಗೆ ಬೆದರಿಕೆಗಳನ್ನು ಹಗುರವಾಗಿ ಪರಿಗಣಿಸದಂತೆ ಕ್ರಿಕೆಟಿಗ ಹಾಗೂ ಅವರ ಕುಟುಂಬಕ್ಕೆ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಹಿಂದೆ ಬೆದರಿಕೆ ಪತ್ರ ಬರೆದಿದ್ದ ಗುಂಪೇ ಎರಡನೇ ಪತ್ರವನ್ನು ಕೂಡ ಬರೆದಿದ್ದು, 50 ಲಕ್ಷ ರೂಪಾಯಿಗಳ ಬೇಡಿಕೆಯಿಡಲಾಗಿದೆ. ಈ ಸಂಬಂಧ ಧೋನಿಯವರಿಗೆ ನೀಡಲಾಗಿರುವ ಭದ್ರತೆಯನ್ನು 'ಝೆಡ್' ದರ್ಜೆಗೇರಿಸಲಾಗಿತ್ತು. ಧೋನಿಯವರ ರಾಂಚಿಯ ಮನೆಗೆ ಅಂಚೆ ಮ‌ೂಲಕ ಪತ್ರವನ್ನು ರವಾನಿಸಲಾಗಿದ್ದು, ಶಂಕಿತ ರೂವಾರಿ ತಸ್ಲೀಮ್ ಸದ್ಯ ಮರೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲ ಬೆದರಿಕೆ ಪತ್ರ ಬರುತ್ತಿದ್ದಂತೆ ಅದನ್ನು ಧೋನಿ ಕುಟುಂಬ ರಾಂಚಿಯ ಪೊಲೀಸ್ ಅಧೀಕ್ಷಕರಿಗೆ ಹಸ್ತಾಂತರಿಸಿತ್ತು ಮತ್ತು ಹೆಚ್ಚಿನ ಭದ್ರತೆ ಒದಗಿಸುವಂತೆ ವಿನಂತಿ ಮಾಡಿಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಪತ್ರವನ್ನು ಯಾರಿಗೂ ತೋರಿಸಬಾರದು ಎಂದು ಎರಡನೇ ಪತ್ರದಲ್ಲಿ ತಾಕೀತು ಮಾಡಲಾಗಿದೆ.

ಅದೇ ಹೊತ್ತಿಗೆ ಸ್ಥಳೀಯ ಸಂಘಟನೆ 'ಸುರೀಂದರ್ ಬೆಂಗಾಲಿ ಗ್ಯಾಂಗ್' ಬೆದರಿಕೆಯ ಹಿಂದೆ ಇರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಿಡಿಗೇಡಿಗಳ ಕೃತ್ಯವಿರಬಹುದು ಎಂಬ ಅಂಶಗಳನ್ನೂ ಪೊಲೀಸರು ತಳ್ಳಿ ಹಾಕಿಲ್ಲ.

ಮತ್ತೊಂದು ಸುದ್ದಿ: ಧೋನಿಗೆ ಜೀವ ಬೆದರಿಕೆ: ಭದ್ರತೆ 'ಝೆಡ್' ದರ್ಜೆಗೆ

ವೆಬ್ದುನಿಯಾವನ್ನು ಓದಿ