ನನ್ನ ಬಂಧನ ಒಂದು ಪಿತೂರಿಯ ಭಾಗ : ಎಸ್.ಶ್ರೀಶಾಂತ್

ಗುರುವಾರ, 13 ಜೂನ್ 2013 (13:50 IST)
PR
ನನಗೆ ಕ್ರಿಕೆಟ್ ಮೇಲೆ ತುಂಬಾ ಅಭಿಮಾನವಿದೆ. ನಾನು ಕ್ರಿಕೆಟ್ ಕಾಲಿಟ್ಟ ಗಳಿಗೆಯಿಂದ ಉತ್ತಮ ಪ್ರದರ್ಶನ ನೀಡಲು ಯತ್ನಿಸಿದ್ದೆ. ನಾನು ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದೇನೆ. ನಾನು ಯಾರನ್ನೂ ದೂರಲು ಇಷ್ಟಪಡಲಾರೆ. ನಡೆದಿದ್ದೆಲ್ಲಾ ಕೆಟ್ಟ ಕನಸೆಂದು ಭಾವಿಸುವೆ’’ ಎಂದು ಶ್ರೀಶಾಂತ್ ಹೇಳಿದ್ದಾರೆ.

‘‘ನಾನು ಯಾವುದೇ ತಪ್ಪನ್ನು ಮಾಡಿಲ್ಲ. ನನಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ನನಗೆ ಮತ್ತೊಮ್ಮೆ ಭಾರತ ತಂಡದಲ್ಲಿ ಆಡುವ ವಿಶ್ವಾಸವಿದೆ’’ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧಿತನಾಗಿ ಬುಧವಾರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿರುವ ರಾಜಸ್ಥಾನ ರಾಯಲ್ಸ್‌ನ ಕಳಂಕಿತ ಕ್ರಿಕೆಟಿಗ ಎಸ್.ಶ್ರೀಶಾಂತ್ ಹೇಳಿದ್ದಾರೆ.

‘‘ಕ್ರಿಕೆಟ್ ಆಡುವುದು ನನ್ನ ಕನಸು. ಎಲ್ಲರೂ ನಾನು ಕ್ರಿಕೆಟ್ ಕಣಕ್ಕೆ ಮರಳುವುದನ್ನು ಬಯಸುತ್ತಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಆಡುವ ಕನಸು ಹೊಂದಿರುವೆ. ಆದರೆ, ನನಗೆ ತಂಡದಲ್ಲಿ ಸ್ಥಾನ ಸಿಗುವ ಕುರಿತು ಇದೀಗ ಯಾವುದೆ ಖಚಿತತೆಯಿಲ್ಲ’’ ಎಂದು 27 ದಿನಗಳ ಕಾಲ ದಿಲ್ಲಿಯ ತಿಹಾರ್ ಜೈಲಿನಲ್ಲಿ ಕಳೆದಿದ್ದ ಶ್ರೀಶಾಂತ್ ಸುದ್ದಿಗಾರರಿಗೆ ತಿಳಿಸಿದರು.

ನಿಮ್ಮನ್ನು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಸಲಾಗಿತ್ತೇ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ರೀಶಾಂತ್,‘‘ ನಾನು ಯಾವುದೆ ರೀತಿಯ ತಪ್ಪನ್ನು ಮಾಡಿರಲಿಲ್ಲ. ನನ್ನ ಬಂಧನ ಒಂದು ಪಿತೂರಿಯ ಭಾಗವಾಗಿದೆ. ಸತ್ಯ ಶೀಘ್ರವೇ ಹೊರಬರಲಿದೆ’’ ಎಂದು ಶ್ರೀಶಾಂತ್ ಅಭಿಪ್ರಾಯಪಟ್ಟರು.

ವೆಬ್ದುನಿಯಾವನ್ನು ಓದಿ