ನಿವೃತ್ತಿ ಸದ್ಯದ ನಿರ್ಧಾರ ಮಾತ್ರ: ಮೊಹಮ್ಮದ್ ಯೂಸುಫ್

ಬುಧವಾರ, 31 ಮಾರ್ಚ್ 2010 (19:06 IST)
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿಷೇಧವನ್ನು ಪ್ರತಿಭಟಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎರಡು ದಿನಗಳ ಹಿಂದಷ್ಟೇ ವಿದಾಯ ಹೇಳಿದ್ದ ಪಾಕಿಸ್ತಾನ ಮಾಜಿ ಕಪ್ತಾನ ಮೊಹಮ್ಮದ್ ಯೂಸುಫ್ ಮತ್ತೆ ವಾಪಸಾಗುವ ಮುನ್ಸೂಚನೆಗಳನ್ನು ನೀಡಿದ್ದು, ನಿವೃತ್ತಿ ಸದ್ಯದ ನಿರ್ಧಾರ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ನಿವೃತ್ತಿ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಒತ್ತಡಗಳು ಬಂದ ನಂತರ ಅವರು ಈ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಮತ್ತೆ ತಂಡಕ್ಕೆ ಕರೆಸಿಕೊಳ್ಳುವುದಿದ್ದರೆ ಅವರು ನಿವೃತ್ತಿ ನಿರ್ಧಾರವನ್ನು ಬದಲಾಯಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಆದರೆ ಯೂಸುಫ್ ನಿವೃತ್ತಿ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯ ನಿರ್ವಾಹಕಾಧಿಕಾರಿ ವಾಸಿಮ್ ಬಾರಿ, ಅದು ಅವರ ವೈಯಕ್ತಿಕ ನಿರ್ಧಾರ ಎಂದು ತಿಳಿಸಿದ್ದಾರೆ.

ನಿವೃತ್ತಿಯಾಗುವುದು ಯೂಸುಫ್ ಅವರ ಖಾಸಗಿ ತೀರ್ಮಾನ. ಅದನ್ನು ಆಧರಿಸಿ ಆಯ್ಕೆ ಸಮಿತಿಯು ಅವರನ್ನು ಭವಿಷ್ಯದ ತಂಡಕ್ಕೆ ಆಯ್ಕೆ ನಡೆಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸುತ್ತದೆ ಎಂದು ಅವರು ವಿವರಣೆ ನೀಡಿದ್ದಾರೆ.

ತಮ್ಮ ನಿರ್ಧಾರವನ್ನು ಮರು ಪರಿಶೀಲನೆ ನಡೆಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಯೂಸುಫ್ ಅವರಲ್ಲಿ ಕೇಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಬಾರಿ ಇದೇ ಸಂದರ್ಭದಲ್ಲಿ ನಿರಾಕರಿಸಿದ್ದಾರೆ.

ಮಾಜಿ ನಾಯಕರುಗಳಾದ ಇಂಜಮಾಮ್ ಉಲ್ ಹಕ್, ರಮೀಜ್ ರಾಜಾ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರುಗಳು ಯೂಸುಫ್ ಅವರನ್ನು ಬೆಂಬಲಿಸಿದ್ದಾರೆ. ಆದರೆ ನಿವೃತ್ತಿ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.

ಕಳೆದ ಆರು ತಿಂಗಳುಗಳಿಂದ ವಿವಾದಗಳನ್ನೇ ಉಸಿರಾಡುತ್ತಿದ್ದ ಯೂಸುಫ್ ಇಂತಹ ನಿರ್ಧಾರಕ್ಕೆ ಬರುವ ಒತ್ತಡಕ್ಕೆ ಸಿಲುಕಿದ್ದರು ಎಂದು ರಮೀಜ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ