ನಿಷೇಧ ಉಲ್ಲಂಘಿಸಿದ ಆಮೀರ್; ಐಸಿಸಿ ತನಿಖೆ

ಗುರುವಾರ, 9 ಜೂನ್ 2011 (12:08 IST)
PTI
ತಮ್ಮ ಮೇಲೆ ನಿಷೇಧವಿರುವ ಹೊರತಾಗಿಯೂ ಇಂಗ್ಲಿಂಷ್ ಡಿವಿಷನ್ ವನ್ ಲೀಗ್‌ನಲ್ಲಿ ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಷೇಧವನ್ನು ತಿರಸ್ಕರಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ವೇಗದ ಬೌಲರ್ ಮೊಹಮ್ಮದ್ ಆಮೀರ್ ಇದೀಗ ಕಂಗೆಣ್ಣಿಗೆ ಗುರಿಯಾಗಿದ್ದಾರೆ.

ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದಿದ್ದ ಈ ಪಾಕ್ ಯುವ ಬೌಲರ್ ಮೇಲೆ ಐಸಿಸಿ ಐದು ವರ್ಷಗಳ ಕಠಿಣ ನಿಷೇಧವನ್ನು ಹೇರಿತ್ತು. ಈ ಅವಧಿಯಲ್ಲಿ ಯಾವುದೇ ದರ್ಜೆಯ ಕ್ರಿಕೆಟನ್ನು ಆಮೀರ್ ಆಡುವಂತಿಲ್ಲ. ಆದರೆ ಇಂಗ್ಲೆಂಡ್‌ನ ಸರ್ರೆ ಕ್ರಿಕೆಟ್ ಲೀಗ್ ನಲ್ಲಿ ಆಡುವ ಮೂಲಕ ಆಮೀರ್ ನಿಯಮ ಉಲ್ಲಂಘಿಸಿದ್ದಾರೆ.

ಇದೀಗ ಐಸಿಸಿ ತನಿಖೆಯನ್ನು ಕೈಗೊಳ್ಳಲಿದ್ದು, ನಿಷೇಧ ಉಲ್ಲಂಘಿಸಿರುವುದು ಖಚಿತಗೊಂಡಲ್ಲಿ ಮತ್ತಷ್ಟು ಕಠಿಣ ಶಿಕ್ಷೆಗೆ 19ರ ಹರೆಯದ ಈ ಪಾಕ್ ವೇಗಿ ಗುರಿಯಾಗುವ ಸಾಧ್ಯತೆಯಿದೆ. ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಲು ಬಯಿಸಿರುವ ಆಮೀರ್, ತಾನು ಸೌಹಾರ್ದ ಪಂದ್ಯವನ್ನು ಆಡಿದ್ದು, ಯಾವುದೇ ಅಧಿಕೃತ ಪಂದ್ಯವನ್ನಾಡಿಲ್ಲ ಎಂದಿದ್ದಾರೆ.

ಈ ಹಿಂದೆ ಸ್ಪಾಟ್ ಫಿಕ್ಸಿಂಗ್‌ ಹಗರಣಕ್ಕೆ ಸಂಬಂಧಪಟ್ಟಂತೆ ಆಮೀರ್ ಸೇರಿದಂತೆ ಪಾಕಿಸ್ತಾನದ ಮಾಜಿ ಟೆಸ್ಟ್ ನಾಯಕ ಸಲ್ಮಾನ್ ಭಟ್ ಮತ್ತು ಮೊಹಮ್ಮದ್ ಆಸಿಫ್ ಮೇಲೆ ಐಸಿಸಿ ಶಿಕ್ಷೆಯನ್ನು ವಿಧಿಸಿತ್ತು. ಭಟ್ ಹಾಗೂ ಆಸಿಫ್ ಕ್ರಮವಾಗಿ ಹತ್ತು ಹಾಗೂ ಏಳು ವರ್ಷಗಳ ನಿಷೇಧಕ್ಕೊಳಗಾಗಿದ್ದರು.

ವೆಬ್ದುನಿಯಾವನ್ನು ಓದಿ