ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಗೆ ಟಿ20 ಫೈನಲ್‌ನ ಉಚಿತ ಟಿಕೆಟ್ ಕೊಡಿಸಿದ ಧೋನಿ

ಸೋಮವಾರ, 7 ಏಪ್ರಿಲ್ 2014 (11:43 IST)
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕ್ ಪಂದ್ಯವೆಂದರೆ ಅದು ಯುದ್ಧದಂತೆಯೇ. ಈ ತಂಡಗಳೆರಡು ಕಣಕ್ಕಿಳಿದವೆಂದರೆ ಕ್ರಿಕೆಟ್ ಜಗತ್ತು ಮೈನವಿರೇಳಿಸಿಕೊಳ್ಳುತ್ತದೆ. ಭಾರತದಲ್ಲಿ ಕ್ರಿಕೆಟ್ ಎಷ್ಟು ಜನಪ್ರಿಯವೋ, ಹಾಗೆ ಪಾಕಿಸ್ತಾನದಲ್ಲೂ ಕ್ರಿಕೆಟ್ ಹುಚ್ಚು ಎಲ್ಲೆ ಮೀರುವಷ್ಟಿದೆ.
PTI

ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಯೊಬ್ಬನ ಕ್ರಿಕೆಟ್ ಪ್ರೇಮವನ್ನು ತಣಿಸುವ ಕಾರ್ಯದಿಂದಾಗಿ ಭಾರತ ತಂಡದ ಕೂಲ್ ಕಪ್ತಾನ ಎಂ.ಎಸ್. ಧೋನಿ ಸದ್ದು ಮಾಡಿದ್ದಾರೆ.

ಪಾಕಿಸ್ತಾನದ ಕಟ್ಟಾ ಕ್ರಿಕೆಟ್ ಪ್ರೇಮಿ ಮೊಹಮದ್ ಬಷೀರ್‌ಗೆ,ನಿನ್ನೆ ನಡೆದ ಐಸಿಸಿ ವಿಶ್ವ ಟಿ-20 ಫೈನಲ್‌ನಲ್ಲಿ ಉಚಿತ ಟಿಕೆಟ್ ಕೊಡಿಸಿದ ಧೋನಿ ಇಂಡೋ-ಪಾಕ್ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದಿದ್ದಾರೆ.

ಪ್ರಸ್ತುತ ಚಿಕಾಗೋದಲ್ಲಿ ನಿವಾಸಿಯಾದ ಬಷೀರ್‌‌ಗೆ ಕ್ರಿಕೆಟ್ ಅಂದರೆ ಹುಚ್ಚು ಪ್ರೇಮ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನಂತೂ ಅವರು ಎಂತಹ ಪರಿಸ್ಥಿತಿಯಲ್ಲೂ ತಪ್ಪಿಸಿಕೊಳ್ಳಲಾರರು. ಬಾಂಗ್ಲಾದೇಶದಲ್ಲಿ ನಿನ್ನೆ ಮುಕ್ತಾಯಗೊಂಡ 2014ರ ಚುಟುಕು ಕ್ರಿಕೆಟ್ ಕದನವನ್ನು ಕಣ್ತುಂಬಿಸಿಕೊಳ್ಳಲು ಬಷೀರ್ ಚಿಕಾಗೋದಿಂದ ಬಂದಿದ್ದರು.

ತವರು ತಂಡ ಟೂರ್ನಿಯಿಂದ ಹೊರಬಿದ್ದುದ್ದಕ್ಕೆ ನೊಂದುಕೊಂಡರಾದರೂ, ಭಾರತ ಫೈನಲ್ ಪ್ರವೇಶಿಸುವುದು ತಿಳಿಯುತ್ತಿದ್ದಂತೆ ಫೈನಲ್ ನೋಡುವ ತವಕದಿಂದ ಢಾಕಾಗೆ ಬಂದಿಳಿದರು. ಆದರವರಿಗೆ ಟಿಕೆಟ್ ಸಿಗಲಿಲ್ಲ. ಪಟ್ಟುಬಿಡದ ಬಷೀರ್, ಭಾರತ ತಂಡ ಅಭ್ಯಾಸದಲ್ಲಿದ್ದಾಗ ಧೋನಿಯನ್ನು ಭೇಟಿಯಾಗಿ ಅವರಿಂದ ಟಿಕೇಟು ಪಡೆಯುವಲ್ಲಿ ಕೊನೆಗೂ ಯಶಸ್ವಿಯಾದರು.

"ನಿನ್ನೆ ಬೆಳಿಗ್ಗೆ ಭಾರತ ತಂಡ ನೆಟ್ ಅಭ್ಯಾಸ ನಡೆಸುತ್ತಿದ್ದಾಗ ಅಲ್ಲೇ ಹತ್ತಿರದಲ್ಲಿ ನಿಂತು ನೋಡುತ್ತಿದ್ದೆ. ಈ ಹಿಂದೆ ನಡೆದ ಭಾರತ ಮತ್ತು ಪಾಕ್ ನಡುವಣದ ಪಂದ್ಯ ಒಂದರಲ್ಲಿ ನನ್ನನ್ನು ಧೋನಿ ಚೆನ್ನಾಗಿ ಗಮನಿಸಿದ್ದರು. ಇಂದು ಧೋನಿ ನನ್ನ ಗುರುತು ಹಿಡಿದು ಮಾತಾಡಿಸಿದಾಗ ಟಿಕೇಟು ಸಿಗಲಿಲ್ಲವೆಂಬುದನ್ನು ತಿಳಿಸಿದೆ. ಕೂಡಲೇ ಟ್ರೈನರ್ ರಮೇಶ್ ಮಾನೆಯವರನ್ನು ಕರೆದ ಧೋನಿ ಕಾಂಪ್ಲಿಮೆಂಟರಿ ಪಾಸ್ ಕೊಡಿಸಿದರು'' ಎಂದು ಬಷೀರ್ ತಮ್ಮ ಅಮಿತಾನಂದದ ಕ್ಷಣಗಳನ್ನು ವಿವರಿಸಿದ್ದಾರೆ.

"ಭಾರತದ ತಂಡದ ನಾಯಕ ನನ್ನ ಜತೆ ಮಾತನಾಡಿದಾಗ ನನ್ನ ಆನಂದಕ್ಕೆ ಎಲ್ಲೆಯೇ ಇರಲಿಲ್ಲ. ನಾನು ಪಾಕಿಸ್ತಾನ್ ತಂಡದ ಅಭಿಮಾನಿ. ಆದರೀಗ ನಾನು ಧೋನಿಯ ಕಟ್ಟಾ ಅಭಿಮಾನಿ ಆಗಿದ್ದೇನೆ. ವಿಶೇಷವೆಂದರೆ ನನಗೆ ಭಾರತದೊಂದಿಗೆ ಮತ್ತೊಂದು ನಂಟಿದೆ. ನಾನು ಹೈದರಾಬಾದ್‪ನ ಅಳಿಯ, ನನ್ನ ಪತ್ನಿ ಭಾರತದವಳು '' ಎಂದು ಬಷೀರ್ ಖುಷ್ ಖುಷ್ ಆಗಿ ಹೇಳಿಕೊಂಡಿದ್ದಾನೆ.

ವೆಬ್ದುನಿಯಾವನ್ನು ಓದಿ