ಪಾಕಿಸ್ತಾನ ಕ್ರಿಕೆಟಿನ ಗ್ರಹಚಾರ ಇನ್ನೂ ಮುಗಿದಿಲ್ಲ !

ಶನಿವಾರ, 3 ಜನವರಿ 2009 (19:50 IST)
ಶ್ರೀಲಂಕಾ ಕ್ರಿಕೆಟ್ ತಂಡವು ತನ್ನ ಪಾಕ್ ಪ್ರವಾಸದ ವೇಳಾಪಟ್ಟಿಯನ್ನು ಬದಲಿಸಿದ್ದು, ಈ ಹಿಂದೆ ನಿಗದಿಯಾಗಿರುವುದಕ್ಕಿಂತ ಕಡಿಮೆ ಪಂದ್ಯಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮ‌ೂಲಗಳು ತಿಳಿಸಿವೆ. ಹೀಗಾಗಿ ಮತ್ತೆ ಪಾಕ್-ಲಂಕಾ ಸರಣಿಯಲ್ಲಿ ಅಡಚಣೆ ಕಾಣಿಸಿಕೊಂಡಿದೆ.

ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಫೆಬ್ರವರಿ 15ರಿಂದ ಪ್ರವಾಸ ಕೈಗೊಳ್ಳಲಿದ್ದು ಎರಡು ಟೆಸ್ಟ್, ಮ‌ೂರು ಅಂತಾರಾಷ್ಟ್ರೀಯ ಏಕದಿನ ಹಾಗೂ ಒಂದು ಟ್ವೆಂಟಿ-20 ಪಂದ್ಯಗಳನ್ನಾಡುತ್ತದೆ ಎಂದು ಶ್ರೀಲಂಕಾ ತಿಳಿಸಿದೆ ಎಂದು ಪಿಸಿಬಿ ಪ್ರತಿನಿಧಿ ಸಲೀಮ್ ಅಲ್ತಾಫ್ ಬಹಿರಂಗಪಡಿಸಿದ್ದಾರೆ.

ಈ ಹಿಂದೆ ಪಾಕಿಸ್ತಾನದಲ್ಲಿ ಮ‌ೂರು ಟೆಸ್ಟ್, ಐದು ಏಕದಿನ ಹಾಗೂ ಒಂದು ಟ್ವೆಂಟಿ-20ಯನ್ನು ಆಡಲಿದೆ ಮತ್ತು ಜನವರಿ 20ಕ್ಕೆ ಶ್ರೀಲಂಕಾ ತಂಡ ಪ್ರವಾಸ ಕೈಗೊಳ್ಳಲಿದೆ ಎಂದು ಹೇಳಲಾಗಿತ್ತು.

"ಶ್ರೀಲಂಕಾವು ಇದೀಗ ಬದಲಾಯಿಸಿರುವ ವೇಳಾಪಟ್ಟಿಯ ಪ್ರಕಾರ ನಾವು ಹೋದಲ್ಲಿ ಮಾರ್ಚ್ ಮ‌ೂರರಿಂದ ಆರಂಭವಾಗಲಿರುವ ಬಾಂಗ್ಲಾದೇಶ ಸರಣಿಗೆ ತೊಂದರೆಯಾಗುತ್ತದೆ. ಹಾಗಾಗಿ ಈಗ ಪರಿಸ್ಥಿತಿ ತುಂಬಾ ಕಷ್ಟದಲ್ಲಿದೆ" ಎಂದು ಪಿಸಿಬಿ ಕಚೇರಿ ಮ‌ೂಲಗಳು ತಿಳಿಸಿವೆ.

ಮುಂಬೈ ಉಗ್ರರ ದಾಳಿ ಹಿನ್ನಲೆಯಲ್ಲಿ ಭಾರತದ ಪ್ರವಾಸ ರದ್ದಾದ ಕಾರಣ ಆ ಜಾಗಕ್ಕೆ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಹ್ವಾನಿಸಿತ್ತು.

ಈ ಸಂಬಂಧ ನಾವು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಜತೆ ಮಾತನಾಡುತ್ತಿದ್ದು, ಸರಣಿಯ ದಿನಾಂಕಗಳನ್ನು ಬದಲಾಯಿಸುವಂತೆ ವಿನಂತಿ ಮಾಡಿಕೊಂಡಿದ್ದೇವೆ ಎಂದು ಪಿಸಿಬಿ ಪ್ರತಿನಿಧಿ ಸಲೀಮ್ ಅಲ್ತಾಫ್ ತಿಳಿಸಿದರು. "ನಾವು ಮಾರ್ಚ್ 3ರ ಬದಲಿಗೆ ಮಾರ್ಚ್ ಮಧ್ಯ ಭಾಗದಲ್ಲಿ ಬಾಂಗ್ಲಾ ಪ್ರವಾಸಕ್ಕೆ ತೆರಳಬೇಕಾಗಿದೆ. ಶ್ರೀಲಂಕಾ ಸರಣಿಯನ್ನು ನಾವು ನಡೆಸಬೇಕಾದರೆ ಇದು ಅನಿವಾರ್ಯವಾಗಿದೆ. ಇದಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬ ಭರವಸೆ ನಮಗಿದೆ" ಎಂದು ಅಲ್ತಾಫ್ ಹೇಳಿದ್ದಾರೆ.

ಪಾಕಿಸ್ತಾನವು 2008ರಲ್ಲಿ ಯಾವುದೇ ಟೆಸ್ಟ್ ಪಂದ್ಯವನ್ನಾಡದ ಕಾರಣದಿಂದ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರವಾಸ ನಮಗೆ ಪ್ರಮುಖವಾಗಿದೆ ಎಂದೂ ಅಲ್ತಾಫ್ ಅಭಿಪ್ರಾಯಿಸಿದ್ದಾರೆ.

ಅದೇ ಹೊತ್ತಿಗೆ ಬಾಂಗ್ಲಾ ಸರಣಿ ಮುಗಿಯುತ್ತಿದ್ದಂತೆ ಎಪ್ರಿಲ್ 23ರಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿಯು ಆರಂಭವಾಗಲಿದೆ. ಆದರೆ ಆಸೀಸ್ ತಂಡ ಪಾಕ್ ಪ್ರವಾಸ ಮಾಡುವ ಸಾಧ್ಯತೆ ಕ್ಷೀಣಿಸಿದ್ದು, ತಟಸ್ಥ ಸ್ಥಳದಲ್ಲಿ ಸರಣಿ ನಡೆಯುವುದು ಬಹುತೇಕ ನಿಶ್ಚಿತವಾಗಿದೆ.

ವೆಬ್ದುನಿಯಾವನ್ನು ಓದಿ