ಪಾಕ್ ಅನ್ನು ಮಣಿಸಿ ಕೆನಾಡ ಕಪ್ ಎತ್ತಿದ ಲಂಕಾ

ಮಂಗಳವಾರ, 14 ಅಕ್ಟೋಬರ್ 2008 (12:38 IST)
PTI
ಮಾಫ್ಲೆ ಲೀಫ್ ಕ್ರಿಕೆಟ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಕೆನಾಡ ಕಪ್ ಅಂತಿಮ ಹಣಾಹಣಿಯಲ್ಲಿ ಸನತ್ ಜಯಸೂರ್ಯ್ ಮತ್ತು ಅಜಂತಾ ಮೆಂಡಿಸ್ ಶ್ರೀಲಂಕಾವನ್ನು ಪಾಕಿಸ್ತಾನದ ವಿರುದ್ಧ ವಿಜಯದೆಡೆಗೆ ನಡೆಸಿದರು. ಈ ಮೂಲಕ ಉದ್ಘಾಟನಾ ಟಿ20 ಕೆನಾಡ ಕಪ್ ಅನ್ನು ಇನ್ನೂ ಒಂದು ಒವರ್ ಉಳಿದಿರುವಂತೆಯೇ ಐದು ವಿಕೆಟ್‌ಗಳೊಂದಿಗೆ ಶ್ರೀಲಂಕಾ ಗೆದ್ದುಕೊಂಡಿತು.

ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಮಹೇಲಾ ಜಯವರ್ಧನೆ ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಬೌಲಿಂಗ್ ದಾಳಿಗಿಳಿದ ಅಜಂತಾ ಮೆಂಡಿಸ್, ಸಲ್ಮಾನ್ ಭಟ್, ಶೊಯಬ್ ಮಲ್ಲಿಕ್ ಮತ್ತು ಕಮ್ರಾನ್ ಅಕ್ಮಲ್‌ರ ಪ್ರಮುಖ ವಿಕೆಟ್‌ಗಳನ್ನು ಪಡೆದು ಪಾಕಿಸ್ತಾನವನ್ನು132/7ಕ್ಕೆ ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು. ಉಳಿದಂತೆ ಫೆರ್ನಾಂಡೊ, ತುಷಾರ ಮತ್ತು ಮಹಾರೂಫ್ ಲಂಕಾ ಪರವಾಗಿ ತಲಾ ಒಂದು ವಿಕೆಟ್ ಪಡೆದರು.

ಪಾಕ್ ಆರಂಭಿಕ ಆಟಗಾರ ಸಲ್ಮಾನ್ ಭಟ್ ಅತ್ಯಧಿಕ ಸ್ಕೋರರ್ ಆಗಿದ್ದು ಮೆಂಡಿಸ್‌ಗೆ ಬಲಿಯಾಗುವ ಮೊದಲು 44 ರನ್ ಗಳಿಸಿದರು. ಉಳಿದಂತೆ ಮಿಸ್ಬಾ-ಉಲ್ ಹಕ್ ಅಜೇಯ 23 ಮತ್ತು ನಾಯಕ ಮಲ್ಲಿಕ್ 19ರನ್ ಗಳಿಸಿದರು.

ನಂತರ 133ರನ್ ಮೊತ್ತ ಬೆನ್ನಟ್ಟಿದ ಲಂಕಾಗೆ ಜಯಸೂರ್ಯ ಅತ್ಯುತ್ತಮ ಆರಂಭ ದೊರಕಿಸಿಕೊಟ್ಟರು. ಶ್ರೀಲಂಕಾ ಪರವಾಗಿ ಜಯಸೂರ್ಯ ಅತ್ಯಧಿಕ 40 ಮತ್ತು ಇನ್ನೋರ್ವ ಆರಂಭಿಕ ಆಟಗಾರ ಉದವತ್ತೆ 25ರನ್ ಗಳಿಸಿದರು.

ಪಾಕ್ ಪರವಾಗಿ ಶೋಯಬ್ ಮಲ್ಲಿಕ್ ಎರಡು, ಉಮರ್ ಗುಲ್, ಶಾಹಿದ್ ಆಫ್ರಿದಿ ಮತ್ತು ಫವಾದ್ ಅಲಮ್ ತಲಾ ಒಂದು ವಿಕೆಟ್ ಪಡೆದರು.

ಶ್ರೀಲಂಕನ್ನರು ಇನ್ನೂ ಒಂದು ಒವರ್ ಉಳಿದಿರುವಂತೆ ಐದು ವಿಕೆಟ್‌ಗಳೊಂದಿಗೆ ವಿಜಯದ ಗುರಿ ತಲುಪಿದರು.

ವೆಬ್ದುನಿಯಾವನ್ನು ಓದಿ