ಪಾಕ್ ವಿರುದ್ಧ ಉತ್ತಮ ಪ್ರದರ್ಶನ: ಸೆಹವಾಗ್

ಭಾನುವಾರ, 28 ಅಕ್ಟೋಬರ್ 2007 (12:54 IST)
ಸ್ಫೋಟಕಕಾರಿ ಆರಂಭಿಕ ಆಟಗಾರ ವೀರೇಂದ್ರ ಸೆಹವಾಗ್, ಪಾಕಿಸ್ತಾನದ ವಿರುದ್ಧ ಮುಂದಿನ ತಿಂಗಳು ತವರು ನೆಲದಲ್ಲಿ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ನವೆಂಬರ್ ಐದರಿಂದ ಪಾಕಿಸ್ತಾನದ ವಿರುದ್ಧ ಐದು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಭಾರತ ಕ್ರಿಕೆಟ್ ತಂಡವನ್ನು ಶನಿವಾರ ಆಯ್ಕೆ ಮಾಡಲಾಗಿದ್ದು, ಸೆಹವಾಗ್ ಮತ್ತೊಮ್ಮೆ ಸ್ಥಾನ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

"ನನ್ನ ಆಯ್ಕೆಯ ಕುರಿತು ಆಶಾದಾಯಕನಾಗಿದ್ದೆ. ಏಕೆಂದರೆ, ಪಾಕಿಸ್ತಾನದ ವಿರುದ್ಧ ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದೇನೆ. ಅದೇ ಪ್ರದರ್ಶನ ಮಟ್ಟವನ್ನು ಮುಂದೆಯೂ ಕಾಯ್ದುಕೊಂಡು ಹೋಗುವ ಆತ್ಮವಿಶ್ವಾಸ ತಮಗಿದೆ"ಎಂದವರು ತಂಡಕ್ಕೆ ಆಯ್ಕೆಗೊಂಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

ರಾಹುಲ್ ಅವರನ್ನು ಕೈಬಿಟ್ಟಿದ್ದಕ್ಕೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೆಹವಾಗ್ "ರಾಹುಲ್, ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದು, ಅವರನ್ನು ಪಾಕ್ ವಿರುದ್ಧದ ಸರಣಿಗೆ ಕೈ ಬಿಟ್ಟಿದ್ದಕ್ಕೆ ತುಂಬಾ ನೋವಾಗಿದೆ" ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಧೋನಿ ನಾಯಕತ್ವದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸೆಹವಾಗ್, "ಭಾರತ ತಂಡವನ್ನು ಭವಿಷ್ಯದಲ್ಲಿ ಮುನ್ನಡೆಸಲು ಧೋನಿ ಸಮರ್ಥವಾದ ನಾಯಕ. ಫೀಲ್ಡ್‌ನಲ್ಲಿದ್ದಾಗ ಅವರ ಯೋಚನೆ ಮತ್ತು ಯೋಜನೆಗಳು ತೀವ್ರಗೊಂಡಿರುತ್ತವೆ" ಎಂದು ಸೆಹವಾಗ್, ಧೋನಿ ಬಗ್ಗೆ ಪ್ರಶಂಸೆಯ ಸುರಿಮಳೆಗೈದರು.

ವೆಬ್ದುನಿಯಾವನ್ನು ಓದಿ