ಪ್ಲೇ-ಆಫ್ ಪಂದ್ಯ ಸ್ಥಳಾಂತರದ ಬಗ್ಗೆ ಕಾದು ನೋಡಲು ನಿರ್ಧಾರ

ಮಂಗಳವಾರ, 23 ಏಪ್ರಿಲ್ 2013 (14:38 IST)
PR
PR
ಚೆನ್ನೈನಲ್ಲಿ ನಿಗದಿಯಾಗಿರುವ ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯಾವಳಿಯ ಕ್ವಾಲಿಫೈಯರ್‌ ಮತ್ತು ಎಲಿಮಿನೆಟರ್‌ ಸುತ್ತಿನ ಪಂದ್ಯಗಳನ್ನು ಸ್ಥಳಾಂತರಿಸುವ ಬಗ್ಗೆ ತಮಿಳುನಾಡು ಸರಕಾರದ ಅಭಿಪ್ರಾಯ ಪಡೆದ ನಂತರ ಕ್ರಮ ಕೈಗೊಳ್ಳಲು ಐಪಿಎಲ್‌ ಆಡಳಿತ ಮಂಡಳಿ ನಿರ್ಧರಿಸಿದೆ.

ಲಂಕಾ ವಿರೋಧಿ ಹೋರಾಟ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಆಟಗಾರರಿಗೆ ತವರಿನಲ್ಲಿ ನಡೆಯುವ ಐಪಿಎಲ್‌ ಪಂದ್ಯಗಳಿಂದ ತಮಿಳುನಾಡು ಸರಕಾರ ನಿರ್ಬಂಧಿಸಿತ್ತು.

ಮೇ 21ರಂದು ಮೊದಲ ಕ್ವಾಲಿಫೈಯರ್‌ ಪಂದ್ಯ ಹಾಗೂ ಮರುದಿನ ಎಲಿಮೆನಟರ್‌ ಪಂದ್ಯಗಳು ಚೆನ್ನೈನಲ್ಲಿ ನಿಗದಿಯಾಗಿವೆ. ತಮ್ಮ ನಿರ್ಧಾರದಲ್ಲಿ ಬದಲಾವಣೆ ಇದೆಯೇ ಎಂದು ಕೇಳಲಾಗಿದೆ. ಇದಕ್ಕೆ ಉತ್ತರ ಬಂದ ನಂತರ ಪಂದ್ಯಗಳ ಸ್ಥಳಾಂತರದ ಬಗ್ಗೆ ನಿರ್ಧರಿಸಲು ಸೋಮವಾರ ನಡೆದ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.

ನಾವು ಸರಿಯಾದ ಕ್ರಮ ಅನುಸರಿಸುತ್ತಿದ್ದೇವೆ. ನಾವು ನಿರ್ಧಾರ ಕೈಗೊಳ್ಳುವ ಮುನ್ನ ಸರಕಾರ ಹಾಗೂ ಪೊಲೀಸ್‌ ಆಯುಕ್ತರ ಸಲಹೆ ಪಡೆಯಲಿದ್ದೇವೆ. ಶ್ರೀಲಂಕಾ ಆಟಗಾರರಿಗೆ ಚೆನ್ನೈನಲ್ಲಿ ಆಡಲು ಅವಕಾಶ ನೀಡುವ ಬಗ್ಗೆ ಪ್ರತಿಕ್ರಿಯೆ ದೊರೆತ ನಂತರ ನಿರ್ಧರಿಸಲಾಗುವುದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಒಂದು ವೇಳೆ ಶ್ರೀಲಂಕಾ ಆಟಗಾರರಿಗೆ ಆಡಲು ಅವಕಾಶ ನೀಡಿದರೆ ಪಂದ್ಯಗಳ ಸ್ಥಳಾಂತರದ ಪ್ರಶ್ನೆಯೇ ಉದ್ಭವಿಸುವುದಿಲ್ಲ, ನಿಗದಿಯಂತೆ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಲಂಕಾ ಆಟಗಾರರಿಗೆ ಆಡಲು ಅವಕಾಶ ನೀಡದಿದ್ದಲ್ಲಿ ಈ ಪಂದ್ಯಗಳನ್ನು ಬೆಂಗಳೂರು, ದೆಹಲಿ ಮತ್ತು ಪುಣೆಗಳನ್ನು ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ವೆಬ್ದುನಿಯಾವನ್ನು ಓದಿ