ಬಿಗ್ ಬಾಷ್‌ ಟ್ವೆಂಟಿ-20 ಟೂರ್ನಿಗಿಲ್ಲ ಭಾರತೀಯ ಆಟಗಾರರು

ಶನಿವಾರ, 30 ಏಪ್ರಿಲ್ 2011 (15:23 IST)
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರು ಭಾಗವಹಿಸುತ್ತಿದ್ದರೂ ಅಲ್ಲಿನ ಬಿಗ್ ಬಾಷ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲು ಭಾರತೀಯ ಆಟಗಾರರಿಗೆ ಬಿಸಿಸಿಐ ಅನುಮತಿಯನ್ನು ನಿರಾಕರಿಸಿದೆ.

ಈ ಸಂದರ್ಭದಲ್ಲಿ ಭಾರತದಲ್ಲಿ ದೇಶಿಯ ದರ್ಜೆಯ ಟೂರ್ನಮೆಂಟ್ ನಡೆಯಲಿರುವುದರಿಂದ ಬಿಗ್ ಬಾಷ್‌ನಲ್ಲಿ ಆಟಗಾರರು ಆಡಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯಕಾರಿಣಿ ಮುಖ್ಯಸ್ಥ ರತ್ನಾಕರ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಡಿಸೆಂಬರ್ ಮಧ್ಯಂತರ ಅವಧಿಯಲ್ಲಿ ಬಿಗ್ ಬಾಷ್ ಟೂರ್ನಮೆಂಟ್ ನಡೆಯಲಿದೆ. ಆದರೆ ಈ ಸಂದರ್ಭದಲ್ಲಿ ಆಟಗಾರರಿಗೆ ದೇಶಿಯ ಕ್ರಿಕೆಟ್‌ನ ಬದ್ಧತೆಯಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಕಳೆದ ವರ್ಷವೂ ಕೆಲವು ಭಾರತೀಯ ಆಟಗಾರರು ಬಿಗ್ ಬಾಷ್ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಆಸೀಸ್‌ನ ಕೆಲವು ತಂಡಗಳು ಆಗ್ರಹಿಸಿತ್ತು. ಮತ್ತೊಂದೆಡೆ ಶ್ರೀಲಂಕಾ ಆಟಗಾರರನ್ನು ಕಳುಹಿಸಿಕೊಡಲು ಒಪ್ಪಿಗೆ ಸೂಚಿಸಿದ್ದು, ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದೆ.

ಮಾಜಿ ಆಟಗಾರರಾದ ಶೇನ್ ವಾರ್ನ್ ಮತ್ತು ಆಡಂ ಗಿಲ್‌ಕ್ರಿಸ್ಟ್ ಸೇರಿದಂತೆ ಒಟ್ಟು 35 ಮಂದಿ ಆಸೀಸ್ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ