ಬೇಕಾಗಿಲ್ಲ ನಿಮ್ಮ ಆಯ್ಕೆ: ಅಟಪಟ್ಟು

ಗುರುವಾರ, 4 ಅಕ್ಟೋಬರ್ 2007 (13:48 IST)
ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ತನ್ನ ಆಯ್ಕೆಯನ್ನು ತಿರಸ್ಕರಿಸಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಮರ್ವನ್ ಅಟಪಟ್ಟು ಅವರು, ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಕೇಳಿಕೊಂಡಿದ್ದರು. ಆದರೆ ಈ ಆಹ್ವಾನವನ್ನು ಎಸ್‌ಸಿಬಿ ಅಧಿಕಾರಿಗಳು ತಿರಸ್ಕರಿಸಿ, ಸನತ್ ಜಯಸೂರ್ಯ ಅವರಿಗೆ ಅವಕಾಶ ನೀಡಲಿದೆ ಎಂದು ವರದಿಯಾಗಿದೆ.

ಮರ್ವನ್ ಅಟುಪಟ್ಟು ಅವರನ್ನು ಭೇಟಿಯಾಗುವುದಕ್ಕೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಸಂತಾ ಡಿ ಮೆಲ್ ಆಶಯ ವ್ಯಕ್ತಪಡಿಸಿದ್ದರು. ಆದರೆ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಅಟಪಟ್ಟು ಅವರು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಬಯಕೆ ವ್ಯಕ್ತಪಡಿಸಿ, ಫ್ಯಾಕ್ಸ್ ಕಳಿಸಿದ್ದರು.

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ತನ್ನನ್ನು ನಿರಂತರವಾಗಿ ಕಡೆಗಣಿಸಿರುವುದರಿಂದ ಸಿಟ್ಟಾಗಿರುವ ಅಟಪಟ್ಟು ಅವರು, ಅಗಸ್ಟ್ ತಿಂಗಳಿನಲ್ಲಿ ತಮ್ಮನ್ನು ಗುತ್ತಿಗೆಯಿಂದ ಮುಕ್ತಗೊಳಿಸಬೇಕು ಎಂದು ಕೇಳಿಕೊಂಡಿದ್ದರು.

ಅಟಪಟ್ಟು ನಿರಾಕರಣೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅಸಂತಾ ಡಿ ಮೆಲ್ ಅವರು ಅಟಪಟ್ಟು ಅವರೊಂದಿಗೆ ಮಂಡಳಿ ಯಾವುದೇ ರೀತಿಯ ಮಾತುಕತೆ ಮುಂದುವರಿಸುವುದಿಲ್ಲ. ಅವರ ಬದಲಾಗಿ ಸನತ್ ಜಯಸೂರ್ಯ ಅವರನ್ನು ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಶ್ರೀಲಂಕಾ ಪರ 1990 ರಲ್ಲಿ ಭಾರತದ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‍‌ಗೆ ಕಾಲಿಟ್ಟ ಅವರು ಇವರೆಗೆ 88 ಟೆಸ್ಟ್‌ಗಳಲ್ಲಿ ಹವಳ ದ್ವೀಪವನ್ನು ಪ್ರತಿನಿಧಿಸಿದ್ದಾರೆ. ವಿಪರ್ಯಾಸ ಅಂದರೆ ಕ್ರಿಕೆಟ್ ಜೀವನ ಅಂತ್ಯಗೊಂಡದ್ದು ಕೂಡ ಭಾರತದ ವಿರುದ್ಧ 2005 ರಲ್ಲಿ ಅಹ್ಮದಾಬಾದಿನಲ್ಲಿ ಆಡುವ ಮೂಲಕ.

ವೆಬ್ದುನಿಯಾವನ್ನು ಓದಿ